ಕರಾವಳಿ

ಮಂಗಳೂರು ಮೂಲದ ವಿಜಯಾ ಬ್ಯಾಂಕ್ ಇನ್ನುಮುಂದೆ ಇರಲ್ಲ !

Pinterest LinkedIn Tumblr

ನವದೆಹಲಿ: ಸಾಕಷ್ಟು ವಿರೋಧಗಳ ನಡುವೆಯೇ ಕರ್ನಾಟಕ ಮೂಲದ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ 2019ರ ಏ.1ರಿಂದ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಲಿವೆ. ಸಣ್ಣ ಬ್ಯಾಂಕ್ ಗಳನ್ನು ಪರಸ್ಪರ ವಿಲೀನಗೊಳಿಸಿ, ಜಾಗತಿಕ ಮಟ್ಟದ ಬ್ಯಾಂಕ್‌ಗಳ ನಿರ್ಮಾಣದ ಸರ್ಕಾರದ ಯೋಜನೆ ಭಾಗವಾಗಿ ಈ ವಿಲೀನ ನಡೆಯಲಿದೆ.

ಹೀಗಾಗಿ 1931 ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಎ.ಬಿ.ಶೆಟ್ಟಿ ನೇತೃತ್ವದಲ್ಲಿ ರೈತರೇ ಸ್ಥಾಪಿಸಿದ್ದ ವಿಜಯಾ ಬ್ಯಾಂಕ್ ಇರುವುದಿಲ್ಲ. ವಿಲೀನದ ಬಳಿಕ 14.82 ಲಕ್ಷ ಕೋಟಿ ರು. ವಹಿವಾಟಿನೊಂದಿಗೆ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕಿನ ಬಳಿಕ ದೇಶದ ಮೂರನೇ ದೊಡ್ಡ ಬ್ಯಾಂಕ್ ಸೃಷ್ಟಿಯಾಗಲಿದೆ. ಸೋಮವಾರದಿಂದ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡಾದ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ.

ನೂತನ ಬ್ಯಾಂಕ್ ರಚನೆಯಾದ ಬಳಿಕ ಅದು 9500 ಶಾಖೆಗಳನ್ನು, 13400 ಎಟಿಎಂಗಳನ್ನು ಮತ್ತು 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಈ ಮೂಲಕ ಸರ್ಕಾರಿ ವಲಯದ ಬ್ಯಾಂಕ್‌ಗಳ ಪೈಕಿ ದೇಶದಲ್ಲೇ 2 ನೇ ಅತಿದೊಡ್ಡ ಬ್ಯಾಂಕ್ ಎನ್ನಿಸಿಕೊಳ್ಳಲಿದೆ. ಈ ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾ ಹೊಂದಿರುವ ಪ್ರತಿ 1000 ಷೇರುಗಳಿಗೆ ವಿಜಯಾ ಬ್ಯಾಂಕ್ 402 ಷೇರುಗಳನ್ನು ಮತ್ತು ದೇನಾ ಬ್ಯಾಂಕ್ 110 ಷೇರುಗಳುನ್ನು ಪಡೆಯಲಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮೂರು ಬ್ಯಾಂಕುಗಳ ವಿಲೀನವನ್ನು ಘೋಷಿಸಲಾಗಿತ್ತು. ಆದರೆ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ, ಲಾಭದಲ್ಲಿರುವ ವಿಜಯಾ ಬ್ಯಾಂಕ್ ವಿಲೀನಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಬ್ಯಾಂಕ್‌ಗಳ ವಿಲೀನ ಯೋಜನೆಯಲ್ಲಿ ಮೊದಲನೆಯದಾಗಿ ಈ ಹಿಂದೆ ಕರ್ನಾಟಕ ಮೂಲದ ಎಸ್‌ಬಿಎಂ ಸೇರಿದಂತೆ 5 ಸಣ್ಣ ಬ್ಯಾಂಕ್ ಗಳನ್ನು ಎಸ್‌ಬಿಐನಲ್ಲಿ ವಿಲೀನಗೊಳಿಸಲಾಗಿತ್ತು.

ವಿಲೀನ ಏಕೆ?

ಜಾಗತಿಕ ಮಟ್ಟದ ಬ್ಯಾಂಕ್‌ಗಳಿಗೆ ಸವಾಲು ಒಡ್ಡುವ ಅಥವಾ ಅವುಗಳಿಗೆ ಸರಿಸಮನಾದ ಬ್ಯಾಂಕ್‌ಗಳನ್ನು ರಚಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನ ಮಾಡಿ ದೊಡ್ಡ ಬ್ಯಾಂಕ್ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರನ್ವಯ ಇದೀಗ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಲಾಗುತ್ತಿದೆ.

ವಿಲೀನಕ್ಕೆ ವಿರೋಧ ಇತ್ತು ವಿಜಯಾ ಬ್ಯಾಂಕ್ ಲಾಭದಲ್ಲಿರುವ ಸರ್ಕಾರಿ ಬ್ಯಾಂಕ್‌ಗಳ ಪೈಕಿ ಒಂದು. ಮತ್ತೊಂದೆಡೆ ಬ್ಯಾಂಕ್ ಆಫ್ ಬರೋಡಾ ನಷ್ಟದಲ್ಲಿದೆ. ಹೀಗಾಗಿ ಲಾಭದಲ್ಲಿರುವ ಬ್ಯಾಂಕ್‌ನಲ್ಲಿ ನಷ್ಟದಲ್ಲಿರುವ ಬ್ಯಾಂಕ್ ವಿಲೀನ ಮಾಡಬೇಕು. ವಿಜಯಾ ಬ್ಯಾಂಕ್‌ನಲ್ಲೇ ಬ್ಯಾಂಕ್ ಆಫ್ ಬರೋಡಾ ವಿಲೀನ ಮಾಡಬೇಕು ಎಂದು ಒತ್ತಾಯ ಕೇಳಿಬಂದಿತ್ತು.

Comments are closed.