ಕರಾವಳಿ

ಲೋಕಸಭಾ ಚುನಾವಣೆ ಹಿನ್ನೆಲೆ ಉಡುಪಿ ಜಿಲ್ಲೆಯ ರೌಡಿಗಳ ಮೇಲೆ ನಿಗಾ: ಎಸ್ಪಿ ನಿಶಾ ಜೇಮ್ಸ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ತೊಂದರೆ ನೀಡಬಹುದಾದ 1,660 ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಿಂದಿನ ಚುನಾವಣೆಗಳಲ್ಲಿ ಪ್ರಭಾವ ಬೀರಿದವರು, ಭಯ ಉಂಟುಮಾಡಿದವರನ್ನು ಇಂಟಿಮಿಡೇಟರ್ ಎಂದು ಪರಿಗಣಿಸುತ್ತೇವೆ. ಇಂತಹ 148 ಜನರ ಮೇಲೆ ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.ಜಿಲ್ಲೆಯಲ್ಲಿ 1,660 ತೊಂದರೆ ಮಾಡುವವರನ್ನು (ರೌಡಿ ಶೀಟರ್, ಇಂಟಿಮಿಡೇಟರ್) ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. 1,112 ವ್ಯಕ್ತಿಗಳಿಂದ ಮುಚ್ಚಳಿಕೆ ಬರೆದುಕೊಳ್ಳಲಾಗಿದೆ.ಜಿಲ್ಲೆಯ 1,738 ರೌಡಿಗಳ ಪೈಕಿ 1,401 ರೌಡಿಗಳ ಮೇಲೆ ಪ್ರಕರಣ ದಾಖಲಿಸಿ ಎಂಟು ಜನರನ್ನು ಗಡೀಪಾರು ಮಾಡಲಾಗಿದೆ. ಕೆಲವರ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 255 ಅತಿ ಸೂಕ್ಷ್ಮ, 856 ಸಾಮಾನ್ಯ ಮತಗಟ್ಟೆಗಳಿವೆ. 255 ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 55 ನಕ್ಸಲ್‌ಬಾಧಿತ ಮತಗಟ್ಟೆಗಳಾಗಿವೆ.

ಜಿಲ್ಲೆಯಲ್ಲಿ ಭೀತಿ ಉಂಟುಮಾಡುವ, ಪ್ರಭಾವ ಬೀರಬಹುದಾದ 102 ವಲ್ನರೆಬಲ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ 126 ಮತಗಟ್ಟೆಗಳಿವೆ. ಇಂತಹ ಕಡೆ ಇರುವ ಇಂಟಿಮಿಡೇಟರ್ ಮೇಲೆ ಕ್ರಮ ಜರುಗಿಸುತ್ತಿದ್ದೇವೆ ಎಂದರು.

ಚುನಾವಣಾ ಬಂದೋಬಸ್ತಿಗೆ ಕೇಂದ್ರೀಯ ಅರೆಸೇನಾ ಪಡೆಗಳು ಬರಲಿವೆ. ಒಟ್ಟು ಐದು ಕಂಪೆನಿಗಳನ್ನು ಕೇಳಿದ್ದೇವೆ. ಒಂದು ಕಂಪೆನಿಯಲ್ಲಿ 100ಸಿಬಂದಿ ಇರುತ್ತಾರೆ. ಇವರು ಅತಿಸೂಕ್ಷ್ಮ, ವಲ್ನರೆಬಲ್‌ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಾರೆ ಎಂದು ಎಸ್‌ಪಿ ತಿಳಿಸಿದರು.

Comments are closed.