ಗಲ್ಫ್

ಬಹರೈನ್ ನಲ್ಲಿ ಪಸರಿಸಲಿದೆ ತುಳುನಾಡ ಕಂಪು: ದ್ವೀಪದ ತುಳು ಪ್ರೇಮಿಗಳಿಗೆ ರಾಯಲ್ ತುಳುಕೂಟದ ಆಯೋಜನೆಯಲ್ಲಿ ಎರಡು ದಿನಗಳ ಸಾಂಸ್ಕ್ರತಿಕ ಹಬ್ಬ “ತುಳು ಪರ್ಬ”

Pinterest LinkedIn Tumblr

ಬಹರೈನ್ ; ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ “ರಾಯಲ್ ತುಳುಕೂಟ ಫೌಂಡೇಶನ್ ” ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರ ಸಾರಥ್ಯದಲ್ಲಿ ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಹಯೋಗದೊಂದಿಗೆ ಎರಡು ದಿನಗಳ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ .

ಏಪ್ರಿಲ್ 11ಗುರುವಾರ ಸಂಜೆ 6 ಘಂಟೆಗೆ ಹಾಗು ಏಪ್ರಿಲ್ 12 ರ ಶುಕ್ರವಾರ ಸಂಜೆ 6 ಘಂಟೆಗೆ ಕಾರ್ಯಕ್ರಮವು ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿದ್ದು ತುಳು ನಾಡಿನ ಹೆಸರಾಂತ ಕಲಾವಿದರುಗಳು ಹಾಗು ಸಾಧಕರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ . ತುಳು ಪರ್ಬದ ಪ್ರಥಮ ದಿನವಾದ ಏಪ್ರಿಲ್ 11ರಂದು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ನಾಡಿನ ಸಾಧಕರಾದ ವಿದ್ಯಾರತ್ನ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರೂ ಹಾಗು ಕರ್ನಾಟಕ ಬಿಜೆಪಿ ರಾಜ್ಯಕಾರಿಣಿ ಯ ಸದಸ್ಯರೂ ಆಗಿರುವ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿ ಜ್ಯೋತಿ ಬೆಳಗಿಸಿ ಚಾಲನೆ ನೀಡಲಿರುವರು .

ತುಳು ರಂಗಭೂಮಿಯ ಖ್ಯಾತ ಕಲಾವಿದ ಸುರೇಶ್ ಜೋಡುಕಲ್ಲು ಇವರ “ಭಲೇತೆಲಿಪಾಲೆ ” ಖ್ಯಾತಿಯ ಉಡಲ್ ಕಲಾವಿದರು ತಂಡ ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸಿ ತುಳು ಕಲಾ ಪ್ರೇಮಿಗಳನ್ನು ರಂಜಿಸಲಿದ್ದಾರೆ . ದ್ವೀಪದ ಕಲಾವಿದರುಗಳಿಗೂ ಹಾಸ್ಯ ಪ್ರಹಸನಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿರುವುದು ಮಾತ್ರವಲ್ಲದೆ ದ್ವೀಪದ ಕಲಾವಿದರುಗಳಿಂದ ವೈವಿಧ್ಯಮಯವಾದ ಮನೋರಂಜನಾ ಕಾರ್ಯಕ್ರಮಗಳು ಕೂಡ ರಂಗದಲ್ಲಿ ಮೂಡಿಬರಲಿದೆ . ತುಳು ಪರ್ಬದ ಎರಡನೇ ದಿನವಾದ ಶುಕ್ರವಾರದಂದು ದ್ವೀಪದ ತುಳು ನಾಟಕ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿರುವಂತಹ “ಎಡ್ದೆ೦ತಿನಾ ” ಎನ್ನುವ ವಿಭಿನ್ನ ರೀತಿಯ ಕುತೂಹಲಕಾರಿ ನಾಟಕವು ಬಹರೈನ್ ನ ಹವ್ಯಾಸಿ ಕಲಾವಿದರುಗಳಿಂದ ಪ್ರದಶನಗೊಳ್ಳಲಿದೆ .

ತನ್ನ ಹೊಸ ಹೊಸ ಪ್ರಯೋಗಗಳಿಂದ ದ್ವೀಪದ ರಂಗಭೂಮಿಯಲ್ಲಿ ವಿಭಿನ್ನ ಛಾಪು ಮೂಡಿಸಿರುವ ಖ್ಯಾತ ನಾಟಕಕರ್ತ ಶ್ರೀ ಕರುಣಾಕರ್ ಪದ್ಮಶಾಲಿಯವರು ಈ ನಾಟಕವನ್ನು ರಚಿಸಿ ನಿರ್ದೇಶಿಸುತ್ತಿದ್ದರೆ , ತುಳು ನಾಡಿನ ಖ್ಯಾತ ಸಂಗೀತಗಾರ ಶ್ರೀ ಶಶಿ ಹೆಜಮಾಡಿಯವರು ಈ ನಾಟಕಕ್ಕೆ ಸಂಗೀತ ನೀಡುತ್ತಿದ್ದಾರೆ . ವಿಶಿಷ್ಟ ರೀತಿಯ ಬೆಳಕು ,ರಂಗ ಸಜ್ಜಿಕೆ ಹಾಗು ವಿಶೇಷ ತಾಂತ್ರಿಕತೆಯೊಂದಿಗೆ ರಂಗದ ಮೇಲೆ ಪ್ರದರ್ಶನಗೊಳ್ಳಲಿರುವ ಈ ನಾಟಕವು ದ್ವೀಪದ ಕಲಾಪ್ರೇಮಿಗಳಿಗೆ ಹೊಸ ಅನುಭವ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ . ವಿವಿಧ ಕೊಲ್ಲಿ ದೇಶಗಳ ಗಣ್ಯರುಗಳು ತುಳು ಪರ್ಬ ಕಾರ್ಯಕ್ರಮಕ್ಕಾಗಿ ದ್ವೀಪಕ್ಕೆ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ . ಎರಡು ದಿನಗಳ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ನಿರೂಪಕ ಸಾಹಿಲ್ ರೈ ಯವರು ನಿರೂಪಿಸಲಿದ್ದಾರೆ .

ಕಳೆದ ಮೂರು ದಶಕಗಳಿಂದ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರು ಇಲ್ಲಿನ ಸಾಂಸ್ಕ್ರತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು , ಇದಾಗಲೇ ಅನೇಕ ಯಶಸ್ವೀ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ . ತುಳು ಭಾಷೆ ,ಕಲೆ ,ಸಂಸ್ಕ್ರತಿಯ ಮೇಲೆ ಅತೀವ ಪ್ರೀತಿಯಿರುವ ಇವರು ಇದೀಗ ತಮ್ಮ ರಾಯಲ್ ತುಳು ಕೂಟ ಫೌಂಡೇಶನ್ ನ ಆಶ್ರಯದಲ್ಲಿ ಬ್ರಹತ್ “ತುಳು ಪರ್ಬ ” ಆಯೋಜಿಸುತಿದ್ದಾರೆ . ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮೀ ಪ್ರಯತ್ನಕ್ಕೆ ದ್ವೀಪದ ಎಲ್ಲಾ ತುಳು ಭಾಂದವರ ಸಂಪೂರ್ಣ ಸಹಕಾರ ಬೇಕೆಂದು ಮನವಿ ಮಾಡಿಕೊಂಡರಲ್ಲದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ನಾಗೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 33622442 ಮುಖೇನ ಸಂಪರ್ಕಿಸಬಹುದು .

ವರದಿ- ಕಮಲಾಕ್ಷ ಅಮೀನ್ .

Comments are closed.