ಕರಾವಳಿ

ಉಡುಪಿ ಆರ್.ಟಿ.ಒ. ಕಚೇರಿಗೆ ಎಸಿಬಿ ದಾಳಿ : ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಸಹಿತ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಮಣಿಪಾಲದಲ್ಲಿರುವ ಆರ್.ಟಿ.ಒ. ಕಚೇರಿಗೆ ಮಾ.16 ಶನಿವಾರದಂದು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು ಏರ್ ಶೋನಲ್ಲಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಕಾರಿನ ತೆರಿಗೆ ಮರುವಾಪತಿ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಉಡುಪಿ ಉಪ ಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಹಾಗೂ ಗುತ್ತಿಗೆ ಆಧಾರದ ನೌಕರನನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಯನ್ನು ಆರ್‌ಟಿಒ ಕಚೇರಿಯ ಗುತ್ತಿಗೆ ಆಧಾರ ನೌಕರ ಮುನ್ನಾ ಯಾನೆ ಮುನಾಫ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಉಡುಪಿಯ ವಿಘ್ನೇಶ್ ಎಂಬವರ ಹೊಸ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಇದಕ್ಕೆ ಪಾವತಿಸಿದ್ದ ತೆರಿಗೆಯಲ್ಲಿ ಸುಮಾರು 65 ಸಾವಿರ ರೂ. ಹಣವನ್ನು ಸರಕಾರ ವಾಪಾಸ್ಸು ಮಾಡಬೇಕಾಗಿತ್ತು. ಈ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದ ಉಡುಪಿ ಆರ್‌ಟಿಒ ಆರ್.ಎಂ. ವರ್ಣೇಕರ್ ಶೇ.10ರಷ್ಟು ಅಂದರೆ 6500 ರೂ. ಲಂಚದ ಬೇಡಿಕೆಯನ್ನು ಮುಂದಿಟ್ಟಿದ್ದರು.

ಇದಕ್ಕೆ ಒಪ್ಪದ ವಿಘ್ನೇಶ್ ಮಾ.15ರಂದು ಉಡುಪಿ ಎಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮಣಿಪಾಲದಲ್ಲಿರುವ ಆರ್‌ಟಿಒ ಕಚೇರಿಗೆ ದಾಳಿ ನಡೆಸಿದರು. ಈ ಸಂದರ್ಭ ವಿಘ್ನೇಶ್ ರಿಂದ ಲಂಚ ಸ್ವೀಕರಿಸುತ್ತಿದ್ದ ಆರ್‌ಟಿಒ ವರ್ಣೇಕರ್ ಹಾಗೂ ಮುನಾಫ್ ಎಂಬವರನ್ನು ಪೊಲೀಸರು ಬಂಧಿಸಿ, ನಗದು ಹಣವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ್, ನಿರೀಕ್ಷಕರಾದ ಜಯರಾಮ ಗೌಡ, ಯೋಗೀಶ್, ಸತೀಶ್ ಮೊದಲಾದರು ಈ ಕಾರ್ಯಾಚರಣೆ ನಡೆಸಿದ್ದಾರೆ.

Comments are closed.