ಕರಾವಳಿ

ಚುನಾವಣೆ: ರಾಜಕೀಯ ಸಭೆಗಳ ಸಂಪೂರ್ಣ ವೀಡಿಯೋ ಚಿತ್ರೀಕರಣ- ಉಡುಪಿ‌ ಡಿಸಿ ಸೂಚನೆ

Pinterest LinkedIn Tumblr

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ನಡೆಯುವ ಎಲ್ಲಾ ಸಭೆ ಸಮಾರಂಭಗಳನ್ನು   ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಿ, ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ಹೆಫ್ಸಿಭಾ ರಾಣಿ ಕೊರ್ಲಪತಿ ಸೂಚಿಸಿದ್ದಾರೆ.

 ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ವಿವಿಧ ನೋಡಲ್ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು. ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಭೆ ಸಮಾರಂಭಗಳಿಗೂ ಕಡ್ಡಾಯವಾಗಿ  ಅನುಮತಿ ಪಡೆಯಲೇಬೇಕು.  ಚುನಾವಣಾ ಸಭೆ ಆರಂಭವಾಗುವುದಕ್ಕಿಂತಲೂ ಒಂದು ಗಂಟೆ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಬಂದು ನಿಗಾ ಇಡಬೇಕು. ಸಮಾರಂಭದಲ್ಲಿ ಬಳಸುವ ಕುರ್ಚಿ, ವೇದಿಕೆ, ಧ್ವನಿವರ್ಧಕ, ಶಾಮಿಯಾನ, ವಾಹನಗಳು, ತಿಂಡಿ ತಿನಿಸು ಸೇರಿದಂತೆ ಪ್ರತಿಯೊಂದು ವೆಚ್ಚವನ್ನೂ ಚುನಾವಣಾ ಆಯೋಗ ನಿಗದಿಪಡಿಸಿದ ದರದಂತೆ ಅಭ್ಯರ್ಥಿಯ ವೆಚ್ಚ ಲೆಕ್ಕಕ್ಕೆ ಸೇರಿಸಬೇಕಿದೆ ಎಂದು ಅವರು ತಿಳಿಸಿದರು.

ಅಭ್ಯರ್ಥಿಗಳು ಅಥವಾ ಅವರ ಪರ ಹಾಕುವ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್‍ಗಳಿಗೆ ಅನುಮತಿ ಪಡೆಯಲೇಬೇಕು. ಅನುಮತಿ ನೀಡಿದ ಗಾತ್ರಕ್ಕಿಂತ ಫ್ಲೆಕ್ಸ್ ಗಾತ್ರದಲ್ಲಿ ಒಂಚೂರು ವ್ಯತ್ಯಾಸ ಕಂಡುಬಂದರೂ ಪರವಾನಿಗೆಯ ಉಲ್ಲಂಘನೆ ಎಂದೇ ತಿಳಿದು ಕ್ರಮ ಕೈಗೊಳ್ಳಲಾಗುವುದು. ಸಭೆ ಆರಂಭವಾಗುವ ಒಂದು ಗಂಟೆಗಿಂತ ಮುಂಚೆ ಅಲ್ಲಿ ಪಕ್ಷಗಳ ಧ್ವಜಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಚುನಾವಣೆ ಸಂದರ್ಭದಲ್ಲಿ ನಡೆಯುವ ಯಾವುದೇ ಉತ್ಸವ ಅಥವಾ ಜಯಂತಿ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ರಾಜಕೀಯ ಸಭೆಗಳ ವೀಡಿಯೋ ಚಿತ್ರೀಕರಣ ನಡೆಸಿದ ಬಳಿಕ ಅವುಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿಯೇ ಸಂಕಲನ ಮಾಡಬೇಕು. ಯಾವುದೇ ಕಾರಣಕ್ಕೆ ಹೊರಗಡೆ ಖಾಸಗೀ ಸ್ಥಳಗಳಲ್ಲಿ ಇವುಗಳನ್ನು ಸಂಕಲನ ಮಾಡುವಂತಿಲ್ಲ ಎಂದು ಹೇಳಿದರು. ಏಕಕಾಲಕ್ಕೆ ಒಂದು ನಿಗದಿತ ಸ್ಥಳದಲ್ಲಿ ಅಥವಾ ಆಸುಪಾಸಿನಲ್ಲಿ ಒಂದಕ್ಕಿಂತ ಹೆಚ್ಚಿನ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಅವರು ಸೂಚಿಸಿದರು.

ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್, ವಿವಿಧ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

 

Comments are closed.