ಮಂಗಳೂರು: ‘ಮಾನವಲೋಕದ ಸೌಂದರ್ಯವನ್ನು ಹೆಚ್ಚಿಸುವುದು ಭಾಷೆ. ಅದು ಸಂವಹನ ಮಾಧ್ಯಮ ಹೇಗೋ ವಿವಿಧ ಜನಸಮೂಹವನ್ನು ಒಂದುಗೂಡಿಸುವ ಪ್ರಬಲ ಸಾಧನವೂ ಹೌದು.ಆದ್ದರಿಂದ ಮನುಷ್ಯ ಸಂಬಂಧಗಳನ್ನು ಊರ್ಜಿತದಲ್ಲಿಡಲು ಭಾಷೆ ಮುಖ್ಯ’ ಎಂದು ಹಿರಿಯ ಲೇಖಕಿ,ತೀರ್ಥಹಳ್ಳಿ ತುಂಗಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಲ್.ಸಿ.ಸುಮಿತ್ರಾ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ಮೊಗವೀರಪಟ್ಣದ ಕಡಲ ತೀರದಲ್ಲಿ ಜರಗಿದ ‘ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ’ ಅಂಗವಾಗಿ ಆಯೋಜಿಸಲಾದ ‘ಬಹುಭಾಷಾ ಕವಿ ಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ತನ್ನ ಪ್ರಭುತ್ವದ ರಕ್ಷಣೆಯೊಂದಿಗೆ ದೇಶದ ಸ್ವಾತಂತ್ರ್ಯವನ್ನೂ ಲಕ್ಷ್ಯವಾಗಿರಿಸಿ ಪರಕೀಯ ಪೋರ್ಚುಗೀಸರೊಂದಿಗೆ ಹೋರಾಟ ನಡೆಸಿದ ಅಬ್ಬಕ್ಕ ದೇವಿ 500 ವರ್ಷಗಳಷ್ಟು ಹಿಂದೆಯೇ ಭಾರತೀಯರಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸಿದ ವೀರ ನಾರಿ. ಆಕೆಯ ಹೆಸರಿನಲ್ಲಿ ವಿವಿಧ ಭಾಷೆಯ ಕಾವ್ಯಾನುಸಂಧಾನಕ್ಕೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ’ ಎಂದವರು ನುಡಿದರು.
*ಕವಿತೆಗಳಲ್ಲಿ ಭಾಷಾ ವೈವಿಧ್ಯ*:
ಕವಿಗಳಾದ ರಘು ಇಡ್ಕಿದು, ಶಾಂತಾ ಕುಂಟಿನಿ (ಕನ್ನಡ); ರಾಜೇಶ್ ಶೆಟ್ಟಿ ದೋಟ, ಅಕ್ಷತಾ ರಾಜ್ ಪೆರ್ಲ (ತುಳು); ಮಹಮ್ಮದ್ ಬಡ್ಡೂರು, ಹುಸೇನ್ ಕಾಟಿಪಳ್ಳ (ಬ್ಯಾರಿ); ಎಡ್ವರ್ಡ್ ಲೋಬೋ ತೊಕ್ಕೊಟ್ಟು, ಮಹೇಶ್ ಆರ್.ನಾಯಕ್ (ಕೊಂಕಣಿ); ಕಡ್ಲೇರ ತುಳಸಿ ಮೋಹನ್ (ಅರೆಭಾಷೆ); ಹಾಗೂ ವೇದಾ ಶೆಟ್ಟಿ ಕಾಳಾವಾರ (ಕುಂದಗನ್ನಡ) ತಮ್ಮ ಕವಿತೆಗಳ ಮೂಲಕ ಭಾಷಾವೈಧ್ಯತೆಯನ್ನು ಪ್ರಸ್ತುತ ಪಡಿಸಿದರು.
*ಸೌಹಾರ್ದ ಗೋಷ್ಠಿ*:
ಸ್ವಾಗತಿಸಿ,ಪ್ರಸ್ತಾವನೆಗೈದ ಕವಿಗೋಷ್ಠಿಯ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, ‘ಪಂಜೆ,ಪೈ, ಕಡೆಂಗೋಡ್ಲು,ಸೇಡಿಯಾಪು, ಕಾರಂತ,ಕಯ್ಯಾರ, ಅಮೃತರಂತಹ ಕರಾವಳಿಯ ಸಾಹಿತ್ಯ ದಿಗ್ಗಜಗಳು ದೇಶ-ಭಾಷೆಯ ಗಡಿದಾಟಿ ಬೆಳೆದವರು. ಅಬ್ಬಕ್ಕನ ಕಾಲದಿಂದಲೂ ಮತೀಯ ಸಾಮರಸ್ಯದೊಂದಿಗೆ ಕನ್ನಡ, ತುಳು, ಬ್ಯಾರಿ, ಕೊಂಕಣಿ ಮೊದಲಾದ ಭಾಷೆಗಳನ್ನಾಡುವ ಮಂದಿ ಇಲ್ಲಿ ಸೌಹಾರ್ದತೆಯಿಂದ ಬಾಳುತ್ತಿರುವುದರ ದ್ಯೋತಕವಾಗಿ 1997 ರಲ್ಲಿ ಉತ್ಸವ ಪ್ರಾರಂಭ ವಾದಂದಿನಿಂದಲೂ ಬಹುಭಾಷಾ ಕವಿಗೋಷ್ಠಿಯನ್ನು ಹೊಚ್ಚ ಹೊಸ ಪರಿಕಲ್ಪನೆಗಳೊಂದಿಗೆ ನಡೆಸಲಾಗುತ್ತಿದೆ’ ಎಂದರು.
ಕವಯಿತ್ರಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು. ನಿರ್ಮಲ್ ಭಟ್ ಕೊಣಾಜೆ ವಂದಿಸಿದರು; ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸಹಕರಿಸಿದರು.
Comments are closed.