ಮಂಡ್ಯ: ನಟಿ ಸುಮಲತಾ ಅಂಬರೀಷ್ ವಿರುದ್ಧ ಸಚಿವ ಎಚ್.ಡಿ.ರೇವಣ್ಣ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ. ಮಂಡ್ಯದ ವಿಚಾರವನ್ನು ನನಗೆ ಬಿಟ್ಟುಬಿಡಿ. ರೇವಣ್ಣ ಹೇಳಿಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ, ನಮ್ಮ ನಾಯಕರುಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಶುಕ್ರವಾರ ದೆಹಲಿಯಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅವರು ಹೀಗೆ ಹೇಳಿದ್ದು, ಯಾರ ಬಗ್ಗೆಯೇ ಆಗಲಿ ವೈಯಕ್ತಿಕ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.
ಮಂಡ್ಯದ ರಾಜಕೀಯ ದಿನೇದಿನೇ ಕಾವೇರುತ್ತಿದೆ. ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೇ, ಅತ್ತ ಎದುರಾಳಿಯಾಗಿ ಅಂಬರೀಶ್ ಪತ್ನಿ ಅಖಾಡದಲ್ಲಿದ್ದಾರೆ. ಈ ಮಧ್ಯೆ ಸಿಎಂ ಪುತ್ರನ ರಾಜಕೀಯಕ್ಕೆ ಸುಮಲತಾ ಸ್ಪರ್ಧೆ ಮುಳುವಾಗಲಿದೆ ಎಂದು ಅರಿತ ಜೆಡಿಎಸ್ ನಾಯಕರು ನೇರವಾಗಿ ಅಂಬರೀಶ್ ಕುಟುಂಬದ ತೇಜೋವಧೆಗೆ ಮುಂದಾಗಿದ್ದಾರೆ.
ಸದ್ಯ ಸಚಿವ ಎಚ್.ಡಿ ರೇವಣ್ಣನವರು ಸುಮಲತಾ ಅವರ ಬಗ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೀಡಾಗಿದೆ. ಜೆಡಿಎಸ್ ನಾಯಕರ ಈ ಟೀಕೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಅಂಬರೀಶ್ ಕುಟುಂಬದ ಸಂಬಂಧಿಕರೇ ಸುಮಲತಾರ ತೇಜೋವಧೆಗೆ ಮುಂದಾಗಿದ್ದ ಸಚಿವ ಡಿ.ಸಿ ತಮಣ್ಣನವರಿಗೆ ಚಳಿ ಬಿಡಿಸಿದ್ದಾರೆ. ಈ ಬೆನ್ನಲ್ಲೇ ಸಚಿವ ಎಚ್.ಡಿ ರೇವಣ್ಣ ಕೂಡ ಮನಬಂದತೆ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸುಮಲತಾ ವಿರುದ್ದ ಜೆಡಿಎಸ್ ನಾಯಕರ ವಾಕ್ಸಮರ ಮಿತಿ ಮೀರಿಸಿದೆ. ಮೊದಲಿಗೆ ಜೆಡಿಎಸ್ಗೆ ಪಕ್ಷನಿಷ್ಠೆ ಪ್ರದರ್ಶಿಸುವ ಸಲುವಾಗಿ ಸಚಿವ ಡಿ.ಸಿ ತಮ್ಮಣ್ಣ ಅಂಬಿ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈ ಬೆನ್ನಲ್ಲೇ ಮತ್ತೋರ್ವ ಜೆಡಿಎಸ್ ನಾಯಕ ಮತ್ತು ಸಚಿವ ಎಚ್.ಡಿ ರೇವಣ್ಣ ಕೂಡ ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. “ಗಂಡ ಸತ್ತು ಆರು ತಿಂಗಳಾಗಿಲ್ಲ, ಈಕೆಗೆ ಯಾಕೇ ರಾಜಕೀಯ ಬೇಕಿತ್ತು” ಎನ್ನುವ ಮೂಲಕ ಎಚ್.ಡಿ ರೇವಣ್ಣ ಸುಮಲತಾರ ಬಗ್ಗೆ ಸುಖಾಸುಮ್ಮನೇ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
ಹೀಗಾಗಿ ಒಂದೆಡೆ ಸಚಿವ ರೇವಣ್ಣನವರ ಹೇಳಿಕೆ ವಿರುದ್ಧವಾಗಿ ಅಂಬಿ ಅಭಿಮಾನಿಗಳು ಕೆಂಡಮಂಡಲರಾಗಿದ್ದರೇ, ಇನ್ನೊಂದೆಡೆ ಡಿ.ಸಿ ತಮ್ಮಣ್ಣ ವಿರುದ್ಧ ತಮ್ಮ ಸಂಬಂಧಿಕರೇ ತಿರುಗಿ ಬಿದ್ದಿದ್ದಾರೆ. ಹಿರಿಯರ ಬಾಯಲ್ಲಿ ಈ ರೀತಿತ ಮಾತು ತರವಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅಂಬರೀಶ್ ಕುಟಂಬದ ಜತೆಗೆ ತೆಗೆಸಿಕೊಂಡಿದ್ದ ಡಿ.ಸಿ ತಮ್ಮಣ್ಣ ಅವರ ಫೋಟೊ ಹಾಕಿ, ನೀರು ಕುಡಿಯಲ್ಲು ಹೋಗಿದ್ದವರು ಯಾರು? ಎಂದು ಪ್ರಶ್ನಿಸಿದ್ಧಾರೆ.
ಇನ್ನು ತಮ್ಮ ವಿರುದ್ಧ ಟೀಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ ಸುಮಲತಾ. ಜತೆಗೆ ಯಾರ ಬಾಯಲ್ಲೂ ಈ ರೀತಿ ಮಾತುಗಳು ಮಹಿಳೆಯರ ಬಗ್ಗೆ ಬರಬಾರದು. ನಮ್ಮ ದೇಶದ ಸಂಸ್ಕೃತಿ ಮಹಿಳೆಯರಿಗೆ ಪೂಜನೀಯ ಸ್ಥಾನ ಕೊಟ್ಟಿದೆ. ಮಹಿಳೆಯರನ್ನ ಪೂಜಿಸಿದರೆ ಒಳ್ಳೆಯದಾಗುತ್ತೆ ಅನ್ನೋ ದೇಶ ನಮ್ಮದು. ನಾನು ರೇವಣ್ಣನವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನಾವು ಏನೇ ಮಾತಾಡಿದರೂ ಜನಕ್ಕೆ ಸಂದೇಶ ಹೋಗುತ್ತೆ. ನಾವೆಲ್ಲಾ ಸಾಮಾಜಿಕ ಕ್ಷೇತ್ರದಲ್ಲಿರುವಂತವರು. ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು ಎಂದರು.
ಹೀಗೆ ಮಾತು ಮುಂದುವರಸಿದ ಸುಮಲತಾ ಅವರು, ಯಾವುದು ಸರಿ ಮತ್ತು ತಪ್ಪು ಅನ್ನೋದನ್ನ ಅವರು ತಿಳಿದುಕೊಳ್ಳಬೇಕು. ಈ ಬಗ್ಗೆ ಜನ ತೀರ್ಮಾನ ಮಾಡಬೇಕು. ನನ್ನಲ್ಲಿ ತಪ್ಪಿದ್ದರೇ ನಾನು ಬೇಜಾರ್ ಮಾಡ್ಕೋಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವತ್ತೂ ಯಾರಿಗೂ ಸವಾಲ್ ಹಾಕಿಲ್ಲ. ಯಾರನ್ನೂ ವಿರೋಧ ಮಾಡಲ್ಲ. ಯಾರು ಏನೇ ಮಾತಾಡಿಕೊಳ್ಳಲಿ, ನಾನಂತೂ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಪ್ರಚೋದನಕಾರಿ ಹೇಳಿಕೆಗಳಿಂದ ನನ್ನಿಂದ ಏನನ್ನು ಮಾತನಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೇ ಏನೇ ಹೇಳಿಕೆ ನೀಡಿದರು ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ಆಗಲ್ಲ. ಅಂಬರೀಶ್ ಅವರ ಮನಸ್ಥಿತಿ ಕೂಡ ಕೆಟ್ಟದ್ದಾಗಿ ಇರಲಿಲ್ಲ. ಯಾರು ಏನೇ ಮಾತಾಡಿದರೂ ಡೋಂಟ್ ಕೇರ್ ಅನ್ನೋರು. ನಾನು ಕೂಡ ಅಂಬರೀಶ್ ಮಾರ್ಗದರ್ಶನದಲ್ಲೇ ಹೋಗ್ತೀನಿ. ಸಮಾಜಕ್ಕೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಸಂದೇಶ ರವಾನಿಸುವುದು ನಮ್ಮ ಕೈಯ್ಯಲ್ಲಿದೆ ಎಂದು ಜಾಣ್ಮೆಯಾಗಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
Comments are closed.