ಕರಾವಳಿ

ಹೆಮ್ಮಾಡಿ ಮಹಿಳೆ ಅನುಮಾನಾಸ್ಪದ ಸಾವು: ತೀವ್ರಗೊಂಡ ಪೊಲೀಸ್ ತನಿಖೆ, ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ

Pinterest LinkedIn Tumblr

ಕುಂದಾಪುರ: ಇಲ್ಲಿನ ಹೆಮ್ಮಾಡಿಯ ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ವಾಸವಿದ್ದ ಮೀನು ಮಾರಾಟದ ಮಹಿಳೆ ಗುಲಾಬಿ(55) ಎಂಬವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಘಟನಾ ಸ್ಥಳಕ್ಕೆ ಭಾನುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಹಿಳೆ ಮನೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದು, ಮುಂದಿನ ತನಿಖೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಹಿಳೆ ಅಸಹಜ ಸಾವಿನ ಹಿನ್ನೆಲೆ ಎಲ್ಲಾ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು. ಕುಂದಾಪುರ ಡಿವೈ‌ಎಸ್ಪಿ ಬಿ.ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಇದ್ದರು.

ಹೆಮ್ಮಾಡಿಯಲ್ಲಿ ಮೀನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಗುಲಾಬಿ ಗುರುವಾರ ತಡರಾತ್ರಿ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಶುಕ್ರವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಗುಲಾಬಿ ಕುತ್ತಿಗೆಯಲ್ಲಿ ಸರ ಹಾಗೂ ಬೆಂಡೋಲೆ ಇಲ್ಲದೇ ಇರುವುದು ಸಾವಿನ ಬಗ್ಗೆ ಅನುಮಾನ ಮೂಡಲು ಕಾರಣವಾಗಿತ್ತು. ಗುಲಾಬಿ ಸಾವಿನ ಕುರಿತು ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಮರಣೋತ್ತರ ಪರೀಕ್ಷಾ ವರದಿ ಮಂಗಳವಾರ ಪೊಲೀಸರ ಕೈ ಸೇರಲಿದ್ದು, ಮಹಿಳೆ ಸಾವು ಅಸಹಜವೋ ಅಥವಾ ಕೊಲೆಯೋ ಎನ್ನುವ ಬಗ್ಗೆ ನಿಖರವಾಗಿ ತಿಳಿದುಬರಲಿದೆ.

ನಾಲ್ಕು ತಂಡ ರಚನೆ:
ಗುಲಾಬಿ ಅನುಮಾನಾಸ್ಪದ ಸಾವು ಇದೀಗ ಕೊಲೆ ಎಂಬುವುದು ದಟ್ಟವಾಗಿದೆ. ಮೇಲ್ನೋಟಕ್ಕೆ ಗಮನಿಸಿದಾಗ ಮೃತದೇಹದ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಇದೊಂದು ಕೊಲೆ ಎಂಬ ಸಂಶಯ ದಟ್ಟವಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಡಿವೈ‌ಎಸ್ಪಿ ಬಿ.ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಡಿ‌ಆರ್ ಮಂಜಪ್ಪ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಶಂಕಿತ ವ್ಯಕ್ತಿಗಳ ವಿಚಾರಣೆ:
ಚಿನ್ನಾಭರಣಕ್ಕಾಗಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಗುಲಾಬಿಯನ್ನು ಕೊಲೆ ಮಾಡಲಾಗಿದೆ ಎಂಬ ಮಾತುಗಳು ಸ್ಥಳೀಯರ ಬಾಯಿಯಲ್ಲಿ ಹರಿದಾಡತೊಡಗಿದೆ. ಈ ಬಗ್ಗೆ ಶಂಕಿತ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ:

ಹೆಮ್ಮಾಡಿಯಲ್ಲಿ ಮೀನು ಮಾರುವ ಮಹಿಳೆ ನಿಗೂಢ ಸಾವು: ಸ್ಥಳೀಯರಿಂದ ಕೊಲೆ ಶಂಕೆ

Comments are closed.