ಉಡುಪಿ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಬಲಿಯಾಗಿದ್ದಾರೆ. ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಕಾಳಮಂಜಿ ಗ್ರಾಮದ ನಿವಾಸಿ ಪಾರ್ಶ್ವನಾಥ್ ಜೈನ್ (68) ಶುಕ್ರವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತೀವ್ರ ವಾಂತಿ ಭೇದಿಯಿಂದ ಬಳಲುತ್ತಿದ್ದ ಪಾರ್ಶ್ವನಾಥ ಅವರಿಗೆ ಫೆ. 22ರಂದು ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮರುದಿನ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅವರಿಗೆ ಕೆಎಫ್‌ಡಿ ವೈರಸ್ ತಗುಲಿರುವುದು ದೃಢಪಟ್ಟಿತ್ತು.
ಮಣಿಪಾಲ ಆಸ್ಪತ್ರೆಯಲ್ಲಿ 10 ಜನ ಶಂಕಿತ ಕೆಎಫ್‌ಡಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರು ಐಸಿಯುನಲ್ಲಿದ್ದು ಅವರ ಪೈಕಿ ಓರ್ವ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಮಾ.1ರಂದು ಮಂಗಗಳ ಶವ ಪತ್ತೆಯಾಗಿಲ್ಲ. ಇದುವರೆಗೆ 50 ಮಂದಿಯನ್ನು ಶಂಕಿತ ಮಂಗನ ಕಾಯಿಲೆ ತಪಾಸಣೆಗೊಳಪಡಿಸಲಾಗಿದ್ದು ಯಾರಲ್ಲಿಯೂ ಕಾಯಿಲೆ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.