ಉಡುಪಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ನೊಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಈವರೆಗೆ 3852 ಮಂದಿ ನೊಂದಣಿಯಾಗಿರುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕೃತ ಸಣ್ಣ/ ಅತಿ ಸಣ್ಣ ರೈತರು ಅರ್ಜಿ ಸಲ್ಲಿಸಬಹುದಾಗಿದ್ದು, ಸ್ವಯಂ ಘೋಷಣೆಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವ ಅರ್ಹ ರೈತರಿಗೆ ಒಂದು ವರ್ಷಕ್ಕೆ 6000 ರೂ. ವನ್ನು ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ಒದಗಿಸಲಾಗುವುದು.
ಜಿಲ್ಲೆಯ ಎಲ್ಲಾ ಸಣ್ಣ, ಅತಿ ಸಣ್ಣ ರೈತರು ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಬಹುತೇಕ ಪರಿಶಿಷ್ಟ ಜಾತಿ/ ಪಂಗಡದ ರೈತರು ಸಣ್ಣ/ ಅತಿ ಸಣ್ಣ ರೈತರಾಗಿದ್ದು, ಯೋಜನೆಯ ಸವಲತ್ತು ಪಡೆಯಲು ಅರ್ಹರಿರುತ್ತಾರೆ. ಎಲ್ಲಾ ಸಣ್ಣ / ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ/ ಪಂಗಡದ ರೈತರು ಕೂಡಲೇ ಸ್ವಯಂ ಘೋಷಣೆಯನ್ನು ನೀಡಿ ನೊಂದಾಯಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ವಿಧಾನ : ರೈತರು ಸರ್ಕಾರಿ ಸ್ವಾಮ್ಯದ ಕೇಂದ್ರಗಳಾದ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಅಟಲ್ಜಿ ಜನ ಸ್ನೇಹಿ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ಕಛೇರಿಗಳನ್ನು ಸಂಪರ್ಕಿಸಿ, ಸ್ವಯಂ ಘೋಷಣೆಯನ್ನು ಸಲ್ಲಿಸಬಹುದಾಗಿದೆ. ಸ್ವಯಂ ಘೋಷಣೆಯೊಂದಿಗೆ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ಅವಯಂ ಘೋಷಣೆಯನ್ನು ಸಲ್ಲಿಸಬಹುದಾಗಿದೆ.
ಯೋಜನೆಯಡಿ ಸವಲತ್ತು ಪಡೆಯಲು 2 ಹೆಕ್ಟೇರ್ (5 ಎಕ್ರೆ)ಗಿಂತ ಕಡಿಮೆ ಭೂಹಿಡುವಳಿ ಹೊಂದಿರುವ ಎಲ್ಲಾ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.