ಕರಾವಳಿ

ದೇಶದ 80% ಜನರಿಗೆ ಉಚಿತ ಕಾನೂನು ನೆರವು : ಸಿ.ಎಂ.ಜೋಷಿ

Pinterest LinkedIn Tumblr

ಉಡುಪಿ: ಕಾನೂನು ಸೇವಾ ಪ್ರಾಧಿಕಾರದ ಮೂಲಕ ದೇಶದ 80% ರಷ್ಟು ಜನತೆ ಉಚಿತ ಕಾನೂನು ನೆರವು ಪಡೆಯಬಹುದಾಗಿದ್ದು, ಈ ಕುರಿತು ಸೂಕ್ತ ಅರಿವು ಇಲ್ಲದ ಕಾರಣ ಸಾರ್ವಜನಿಕರು ಕಾನೂನು ತೊಡಕುಗಳಿಗೆ ಸಿಲುಕಿ, ತೊಂದರೆ ಪಡುತ್ತಿದ್ದಾರೆ ಈ ಬಗ್ಗೆ ಕಾನೂನು ಸಾಕ್ಷರತಾ ರಥ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ಹೇಳಿದರು.

ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಸಾಕ್ಷರತಾ ರಥ (ಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ)ದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರವು ಜನ ಸಾಮಾನ್ಯರಿಗೆ ಕಾನೂನು ಕುರಿತು ಹೆಚ್ಚಿನ ತಿಳುವಳಿಕೆ ನೀಡುವುದು, ಕಾನೂನು ತೊಡಕುಗಳಿಗೆ ಸಿಲುಕಿದವರಿಗೆ ಉಚಿತ ನೆರವು ನೀಡುವುದು, ರಾಜೀ ಸಂಧಾನ ಮತ್ತು ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಿದ್ದು, ಸಮಾಜದಲ್ಲಿನ ಎಲ್ಲಾ ಮಹಿಳೆಯರಿಗೆ ಮತ್ತು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತ ನೆರವು ನೀಡುವ ಮೂಲಕ ಒಟ್ಟು ಜನಸಂಖ್ಯೆಯ ಶೇ.80 ಜನಸಂಖ್ಯೆ ಇದರ ಪ್ರಯೋಜನ ಪಡೆಯಬಹುದಾಗಿದೆ, ಕಾನೂನು ಸಾಕ್ಷರತಾ ರಥದ ಮೂಲಕ ಎಲ್ಲಡೆ ಸಂಚರಿಸಿ ವಿವಿಧ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಮೂಡಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 3 ದಿನ ಸಂಚರಿಸುವ ಸಾಕ್ಷರತಾ ರಥವು, ಪೋಕ್ಸೋ ಕಾಯಿದೆ, ಮಾದಕ ವ್ಯಸನ, ಮೋಟಾರ್ ವಾಹನ ಕಾಯಿದೆ, ಗ್ರಾಹಕರ ಹಕ್ಕು ಮತ್ತು ರಕ್ಷಣೆ, ಬಾಲಾಪರಾದ ಮತ್ತು ಬಾಲ ನ್ಯಾಯ ಕಾಯ್ದೆ, ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸಲಿದೆ ಎಂದು ಸಿ.ಎಂ. ಜೋಷಿ ಹೇಳಿದರು.ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿಯೇ ಕಾನೂನಿನ ಪರಿಜ್ಞಾನ ಹೊಂದಿದಾಗ ಸಮಾಜ ಸುಭಿಕ್ಷವಾಗುತ್ತದೆ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಇದೇ ಸಂದರ್ಭದಲ್ಲಿ ಮತದಾನ ಮಹತ್ವ ಕುರಿತಂತೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶರು, ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು, ಮತ ಚಲಾಯಿಸದೇ ಇರುವುದು ತಪ್ಪು, ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು, ಮತಯಂತ್ರ ಮತ್ತು ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ರತ್ನಾಕರ್ ಶೆಟ್ಟಿ ಮಾತನಾಡಿ, ಕಾನೂನಿನ ಪರಿಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ, ಕಾನೂನಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡಿದ್ದು, ಅನಕ್ಷರತೆ ಮತ್ತು ಕಾನೂನಿನ ಜ್ಞಾನ ಇಲ್ಲದೆ ಇರುವುದರಿಂದ ಎಲ್ಲರಿಗೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳು ಕಾನೂನಿನ ಪರಿಜ್ಞಾನ, ಹಕ್ಕು ಮತ್ತು ಕರ್ತವ್ಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ಪಿ. ನಾಯಕ್ ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿವೇಕಾನಂದ ಎಸ್. ಪಂಡಿತ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳ, ಕ್ರಿಶ್ಚಿಯನ್ ಹೈಸ್ಕೂಲ್ ಮುಖ್ಯ ಶಿಕ್ಷಕಿ ಹೆಲೆನ್ ವಿ ಸಾಲಿನ್ಸ್ ಉಪಸ್ಥಿತರಿದ್ದರು. ಕ್ರಿಶ್ಚಿಯನ್ ಪ್ರೌಢಶಾಲೆಯ ಹಿರಿಯ ಉಪಾಧ್ಯಾಯ ಸುಬ್ರಾಯ ಸ್ವಾಗತಿಸಿದರು.

Comments are closed.