ಕರಾವಳಿ

ವಾಹನಗಳ ಟೈರ್‌ ಕಳವು ಪ್ರಕರಣ : ಇಬ್ಬರು ಆರೋಪಿಗಳಿಗೆ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Pinterest LinkedIn Tumblr

ಮಂಗಳೂರು : ಆಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಕಂಪೆನಿಯ ವಾಹನಗಳ ಡಿಸ್ಕ್ ಸಮೇತ ಏಳು ಟೈರ್‌ಗಳ ಕಳವು ಪ್ರಕರಣದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ನ್ಯಾಯಾಲಯವು ಒಂದು ವರ್ಷ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ತಣ್ಣೀರುಬಾವಿಯ ರಾಜೇಶ್ ಯಾನೆ ಅಪ್ಪು(24) ಮತ್ತು ಪಂಜಿಮೊಗರು ನಿವಾಸಿ ಸುರೇಶ್ (23) ಶಿಕ್ಷೆಗೊಳಗಾದವರು. ಈ ಪ್ರಕರಣದ ಇನ್ನೋರ್ವ ಆರೋಪಿ ತಣ್ಣೀರುಬಾವಿಯ ನವೀನ್ ಕುಮಾರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿರುವ ಆಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಕಂಪೆನಿಯ ವಾಹನಗಳ ಉಪಯೋಗಕ್ಕಾಗಿ ಬಂಗ್ರ ಕೂಳೂರಿನಲ್ಲಿ ಇರಿಸಿದ್ದ ಡಿಸ್ಕ್ ಸಮೇತ ಇರುವ 7 ಟೈರ್‌ಗಳು 2015 ಎಪ್ರಿಲ್ 26 ರಿಂದ ಮೇ 14 ರ ಮಧ್ಯೆ ಕಳವಾಗಿದ್ದವು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ರಾಜೇಶ್ ಯಾನೆ ಅಪ್ಪು, ನವೀನ್ ಕುಮಾರ್ ಮತ್ತು ಸುರೇಶ್ ಅವರನ್ನು ಬಂಧಿಸಿ ತಣ್ಣೀರುಬಾವಿ ಸಮೀಪ ಅಡಗಿಸಿಟ್ಟಿದ್ದ ಟೈರ್‌ಗಳನ್ನು ವಶ ಪಡಿಸಿಕೊಂಡಿದ್ದರು. ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್. ಅವರು ಮೂವರ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಂತೆ ಆರೋಪಿ ನವೀನ್‌ ಕುಮಾರ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇನ್ನುಳಿದ ಆರೋಪಿಗಳಾದ ರಾಜೇಶ್ ಯಾನೆ ಅಪ್ಪು ಮತ್ತು ಸುರೇಶ್ ಅವರ ಬಗ್ಗೆ ಅಂತಿಮ ವಿಚಾರಣೆ ಫೆ. 26ರಂದು ನಡೆದಿದ್ದು, ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ನ್ಯಾಯಾಧೀಶರಾದ ಮಂಜುನಾಥ್ ಆರ್. ಅವರು ಇಬ್ಬರಿಗೂ ತಲಾ 1 ವರ್ಷ 2 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಬಿ. ಅವರು ವಾದಿಸಿದ್ದರು.

Comments are closed.