ಕರಾವಳಿ

ಮೊಬೈಲ್ ಕಳ್ಳನ ಸೆರೆ ; 48,000 ರೂ. ಮೌಲ್ಯದ ಆರು ಮೊಬೈಲ್‌ ವಶ

Pinterest LinkedIn Tumblr

ಮಂಗಳೂರು: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡುಬಿದಿರೆ ತಾಕೋಡೆಯ ಜಗದೀಶ ಶೆಟ್ಟಿ (36) ಎಂದು ಗುರುತಿಸಲಾಗಿದೆ.

ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಹುಡುಕಾಟದಲ್ಲಿರುವಾಗ ಆರೋಪಿ ಜಗದೀಶ್ ಮಂಗಳೂರು ನಗರ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕಿ ಮಂಜುಳಾ ಎಲ್. ಅವರು ಸಿಬ್ಬಂದಿ ಸಹಾಯದಿಂದ ಆರೋಪಿಯನ್ನು ಬಂಧಿಸಿದರು.

ಬಂಧಿತ ಆರೋಪಿಯಿಂದ ಕಳ್ಳತನ ಮಾಡಿದ ಸುಮಾರು 48,000 ರೂ. ಮೌಲ್ಯದ ಒಟ್ಟು ಆರು ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.17ರಂದು ರಾತ್ರಿ ಮಂಗಳೂರು ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಚೈತನ್ಯಾ ಮತ್ತು ಪರಿವಾರ ಹೋಟೆಲ್ ಮಧ್ಯೆ ಇರುವ ಅಂಗಡಿಯ ಜಗಲಿಯಲ್ಲಿ ಐದು-ಆರು ಮಂದಿ ಸ್ನೇಹಿತರು ಮಲಗುವ ಸಮಯ ಪಕ್ಕದಲ್ಲಿ ಇಟ್ಟಿದ್ದ ಸುಮಾರು 48,000 ರೂ. ಮೌಲ್ಯದ ಒಟ್ಟು ಆರು ಮೊಬೈಲ್‌ಗಳನ್ನು ಕಳವುಗೈದಿದ್ದ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಜಗದೀಶ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಎರಡು ಮನೆಕಳ್ಳತನ, ಒಂದು ಗಾಂಜಾ ಮಾರಾಟ ಪ್ರಕರಣ, ಮೈಸೂರು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳ್ಳತನ ಪ್ರಕರಣ, ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿವೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಕೆ.ಎಂ. ಶರೀಫ್ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕಿ ಮಂಜುಳಾ ಎಲ್. ಹಾಗೂ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.