ಕರಾವಳಿ

ಅಳಪೆ-ಸರಿಪಳ್ಳ ಚರಂಡಿ ನಿರ್ಮಾಣಕ್ಕೆ 13.25 ಲಕ್ಷ ಅನುದಾನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರಿನ 51ನೇ ವಾರ್ಡ್ ಅಳಪೆ-ಸರಿಪಳ್ಳ ವಾರ್ಡಿನಲ್ಲಿ ಚರಂಡಿ ನಿರ್ಮಾಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಈ ಕುರಿತು ಮಾತನಾಡಿದ ಶಾಸಕರು, ಅಲ್ಪಸಂಖ್ಯಾತ ಅಭಿವೃದ್ಧಿ ನಿಧಿಯ ಅಡಿಯಲ್ಲಿ 13.25 ಲಕ್ಷ ರೂಪಾಯಿ ವೆಚ್ಚದಲ್ಲಿ ಸರಿಪಳ್ಳದ ಸಿಸ್ಟರ್ ಕಂಪೌಂಡಿನಿಂದ ತಗ್ಗುಪ್ರದೇಶಕ್ಕೆ ಹೋಗುವ ಇಳಿಜಾರು ರಸ್ತೆಯಲ್ಲಿ ಚರಂಡಿ ನಿರ್ಮಿಸಲಾಗುವುದು. ಇದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿತ್ತು. ಇಲ್ಲಿ ಮಳೆ ನೀರು ಬಿದ್ದರೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಜನರಿಗೆ ಮಳೆಗಾಲದಲ್ಲಿ ಇಲ್ಲಿ ನಡೆಯುವುದೇ ಕಷ್ಟವಾಗುತ್ತಿತ್ತು. ವಾಹನಗಳಿಗೆ ಕೂಡ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಅದನ್ನು ಗಮನದಲ್ಲಿಟ್ಟು ರಸ್ತೆಯ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಲು ಪ್ಲಾನ್ ರೂಪಿಸಿದ್ದೇವೆ.

ಸದ್ಯ ಈಗ ಇರುವ ಅನುದಾನದಲ್ಲಿ ಒಂದು ಭಾಗದಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದು ತಿಳಿಸಿದರು. ಈ ಪ್ರದೇಶದಲ್ಲಿ ಮಳೆಯ ನೀರು ಬಿದ್ದಾಗ ಸರಾಗವಾಗಿ ಹರಿದುಹೋಗಲು ಯಾವ ಭಾಗದಲ್ಲಿ ಮೊದಲು ಸುಸಜ್ಜಿತ ಚರಂಡಿ ನಿರ್ಮಾಣ ಆಗಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ, ಇಂಜಿನಿಯರ್ ಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಜನರಿಗೆ ಉಪಯುಕ್ತವಾಗುವಂತೆ ಕೆಲಸ ನಡೆಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.  ಶಾಸಕರೊಂದಿಗೆ ಸ್ಥಳೀಯ ಪಾಲಿಕೆ ಸದಸ್ಯ ಬಿ ಪ್ರಕಾಶ್, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ವಾರ್ಡ್ ಅಧ್ಯಕ್ಷ ನರೇಶ್, ವಾರ್ಡ್ ಪ್ರಭಾರಿ ಗೀತಾ ಶೆಟ್ಟಿ, ಶರಣ್, ದೀಕ್ಷಿತ್, ಶಶಿಕಲಾ, ಪ್ರವೀಣ್, ಮೇರಿ ಬಾಯ್, ರೀಟಾ ಡೇಲಿಮಾ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

Comments are closed.