ಕರಾವಳಿ

ಊಟದ ಜೊತೆ ಸಿಹಿ, ಖಾರಗಳ ನಡುವಿನ ವಿಶಿಷ್ಟ ಸಾರ . ..

Pinterest LinkedIn Tumblr

ಅನ್ನ, ಸಾಂಬಾರ್, ಚಪಾತಿ, ಹಲವು ತರಕಾರಿಗಳ ಪಲ್ಯಗಳು, ಉಪ್ಪಿನಕಾಯಿ, ಮೊಸರು, ಮಜ್ಜಿಗೆಯಿಂದ ಪೂರ್ಣವಾದ ಬಳಿಕ ಕೊಂಚ ಸಿಹಿ ತಿಂದು ಊಟವನ್ನು ಸಂಪನ್ನಗೊಳಿಸುವುದು ಒಳ್ಳೆಯ ಊಟ ಎನ್ನಿಸಿಕೊಳ್ಳುತ್ತದೆ. ಶುಭಕಾರ್ಯಕ್ಕಾಗಿ ಆಗಮಿಸಿದ ಅತಿಥಿಗಳಿಗೆ ಒಳ್ಳೆಯ ಊಟ ಹಾಕಿಸುವುದು ನಮ್ಮ ಪರಂಪರೆಯ ಒಂದು ಅಂಗವಾಗಿದೆ. ಮದುವೆ, ಹಬ್ಬ, ಹರಿದಿನ ಮೊದಲಾದ ಸಂದರ್ಭಗಳಲ್ಲಿ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರೆ ಮಾತ್ರ ಸತ್ಕಾರ ಪೂರ್ಣವಾದಂತೆ.

ಕೊಂಚ ಗಮನಿಸಿದರೆ ಪ್ರಾರಂಭದಲ್ಲಿ ಖಾರವನ್ನೂ ಅಂತಿಮವಾಗಿ ಸಿಹಿಯನ್ನೂ ತಿನ್ನುವುದು ನಮ್ಮ ಹಿರಿಯರು ನಡೆಸಿಕೊಂಡು ಬಂದ ಪರಂಪರೆಯಾಗಿರುವುದು ತಿಳಿಯುತ್ತದೆ.ಹಿರಿಯರೇನೋ ಹೇಳಿದರು ಸರಿ, ಆದರೆ ಇದಕ್ಕೆ ಕಾರಣ ಕೇಳದೇ ಅವರನ್ನೇ ಅನುಸರಿಸುವುದು ಹೇಗೆ. ಕೊಂಚ ಬದಲಾವಣೆಗಾಗಿ ಮೊದಲೇ ಸಿಹಿಯನ್ನು ತಿಂದು ಬಳಿಕ ಖಾರವಾದ ಪದಾರ್ಥಗಳನ್ನು ತಿಂದರೆ ಹೇಗೆ?

ಈ ಪ್ರಯೋಗ ಮಾಡುವ ಬದಲು ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಈ ವಿಧಾನದ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂದು ತಿಳಿಯುವುದು ಉತ್ತಮ.ಈ ಪ್ರಶ್ನೆಯನ್ನು ಆಯುರ್ವೇದ ತಜ್ಞರಲ್ಲಿ ಕೇಳಿದಾಗ ಅವರು ತಮ್ಮ ಅಪಾರ ಅನುಭವದ ಮೂಲಕ ತಿಳಿಸಿದ ವಿಷಯದ ಸಾರವನ್ನು ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ…

ನಮ್ಮ ಜಠರದಲ್ಲಿ ಆಹಾರ ಧಾವಿಸಲು ಆರಂಭವಾದ ತಕ್ಷಣದಿಂದ ಇದನ್ನು ಅರಗಿಸಿಕೊಳ್ಳಲು ಕೆಲವಾರು ಜೀರ್ಣರಸಗಳು ಜಠರದಲ್ಲಿ ಸ್ರವಿಸುತ್ತವೆ. ಇವು ಆಹಾರವನ್ನು ಒಡೆಯಲು ಅಥವಾ ಜೀರ್ಣಿಸಲು ಪ್ರಾರಂಭಿಸುತ್ತವೆ. ಈ ಜೀರ್ಣರಸಗಳನ್ನು ಹೆಚ್ಚು ಸ್ರವಿಸುವಂತೆ ಮಾಡಲು ಸಿಹಿ ಪದಾರ್ಥಗಳಿಗಿಂತ ಖಾರವಾದ ಪದಾರ್ಥಗಳೇ ಉತ್ತಮ.

ಏಕೆಂದರೆ ಈ ಖಾರ ಜಠರದ ಒಳಗೋಡೆಗಳಲ್ಲಿ ಪ್ರಚೋದನೆ ಉಂಟುಮಾಡಿ ಜಠರರಸಗಳು ಹೆಚ್ಚು ಸ್ರವಿಸಲು ಕಾರಣವಾಗುತ್ತದೆ. ಬದಲಿಗೆ ಪ್ರಾರಂಭದಲ್ಲಿಯೇ ಸಿಹಿ ತಿಂದರೆ ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆ ಮತ್ತು ಕಾರ್ಬೋಹೈಡ್ರೇಟುಗಳು ಜೀರ್ಣರಸಗಳನ್ನು ಪ್ರಚೋದಿಸುವುದಿಲ್ಲ ಬದಲಿಗೆ ಜೀರ್ಣಶಕ್ತಿಗೇ ಹೆಚ್ಚಿನ ಭಾರವಾಗಿ ಬಿಡುತ್ತವೆ.

ಸಿಹಿ ತಿಂದರೆ ಆಹಾರದಲ್ಲಿನ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲವನ್ನು ಹೆಚ್ಚು ಹೀರಿಕೊಳ್ಳಲು ನೆರವಾಗುತ್ತದೆ. ರಕ್ತದಲ್ಲಿ ಟ್ರಿಪ್ಟೋಫ್ಯಾನ್ ಮಟ್ಟ ಹೆಚ್ಚುತ್ತಿದ್ದಂತೆಯೇ ರಕ್ತದಲ್ಲಿ ಸೆರೋಟೋನಿನ್ ಎಂಬ ರಾಸಾಯನಿಕದ ಪ್ರಮಾಣವೂ ಹೆಚ್ಚುತ್ತದೆ. ಈ ಸೆರೋಟೋನಿನ್ ಒಂದು ನ್ಯೂರೋ ಟ್ರಾನ್ಸ್ಮಿಟರ್ ಅಥವಾ ನರಗಳ ಮೂಲಕ ಸೂಚನೆಗಳನ್ನು ಕಳುಹಿಸುವ ಮಾಧ್ಯಮವಾಗಿದ್ದು ಮೆದುಳಿನಲ್ಲಿ ಒಳ್ಳೆಯ ಅಥವಾ ಸುಖಕರ ಭಾವನೆಯನ್ನು ಮೂಡಿಸಲು ನೆರವಾಗುತ್ತದೆ.

ಆದ್ದರಿಂದ ತೃಪ್ತಿ ಭಾವನೆ ಪಡೆಯಲು ಊಟದ ಬಳಿಕ ಕಡೆಯದಾಗಿ ಕೊಂಚ ಸಿಹಿ ತಿನ್ನುವ ಮೂಲಕ ಊಟದ ಪೂರ್ಣತೃಪ್ತಿ ಪಡೆಯಲು ಸಾಧ್ಯವಾಗುತ್ತದೆ. ಇದನ್ನು ಕಂಡುಕೊಂಡ ನಮ್ಮ ಹಿರಿಯರು ಊಟದ ಬಳಿಕ ಕೊಂಚ ಸಿಹಿಯನ್ನು ತಿನ್ನುವುದನ್ನು ಅನುಸರಿಸಿಕೊಂಡು ಬಂದಿದ್ದಾರೆ.

ಆದರೆ ಹಿಂದಿನ ದಿನಗಳಲ್ಲಿ ಸಿಹಿಯನ್ನು ಬೆಲ್ಲದಿಂದ ಮಾಡಲಾಗುತ್ತಿತ್ತು. ಇಂದು ಬಿಳಿಯ ಸಕ್ಕರೆಯಿಂದ ಮಾಡಲಾಗುತ್ತಿದ್ದು ಇದು ಅನಾರೋಗ್ಯಕರ ಎಂದು ಕಂಡುಕೊಳ್ಳಲಾಗಿದೆ. ಏಕೆಂದರೆ ಬಿಳಿ ಸಕ್ಕರೆಯಲ್ಲಿ ಸಿಹಿಯಾದ ಶರ್ಕರದ ಅಂಶ ತುಂಬಾ ಹೆಚ್ಚಾಗಿದ್ದು ಇದನ್ನು ಕರಗಿಸಲು ನಮ್ಮ ಜೀರ್ಣಾಂಗಗಳು ಹೆಚ್ಚು ಕಷ್ಟಪಡಬೇಕಾಗುತ್ತದೆ.

ಒಂದು ವೇಳೆ ಸಕ್ಕರೆಯ ಸೇವನೆ ವಿಪರೀತವಾಗಿದ್ದರೆ ಈ ಸಕ್ಕರೆ ಸ್ಥೂಲಕಾಯ ಹೆಚ್ಚಿಸಲು ಕಾರಣವಾಗುತ್ತದೆ. ಪರೋಕ್ಷವಾಗಿ ಸ್ಥೂಲಕಾಯ ಹಲವು ಇತರ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಿಳಿ ಸಕ್ಕರೆಯ ಬದಲು ಸಾವಯವ ವಿಧಾನದಿಂದ ತಯಾರಿಸಿದ ಬೆಲ್ಲವೇ ಆರೋಗ್ಯಕ್ಕೆ ಉತ್ತಮವಾಗಿದೆ.

Comments are closed.