ಕರಾವಳಿ

ಮನುಷ್ಯನಿಗೆ ಆಹಾರದಂತೆ,ಚಿಗುರೆಲೆಗಳಿಂದ ಆರೋಗ್ಯ ಭಾಗ್ಯ ..!

Pinterest LinkedIn Tumblr

 

ಮನುಷ್ಯನಿಗೆ ಆಹಾರದಂತೆ, ಔಷಧವೂ ಪರಿಸರದಲ್ಲಿ ಲಭ್ಯವಾಗುವಂತೆ ಪ್ರಕೃತಿ ಮಾಡಿದೆ. ಹೀಗೆ ಪ್ರಕೃತಿ ನೀಡಿದ ವರ ಚಿಗುರೆಲೆಗಳು. ಇವನ್ನು ಸೇವಿಸಿ ಆರೋಗ್ಯವನ್ನು ಚಿಗುರಿಸಿಕೊಳ್ಳಬಹುದು.

ಪ್ರಕೃತಿ ತನ್ನ ಒಡಲಲ್ಲಿ ಹಲವಾರು ನಮೂನೆಯ ಔಷಧಿಯುಕ್ತ ಚಿಗುರೆಲೆಗಳನ್ನು ತುಂಬಿಕೊಂಡಿದೆ. ಅವುಗಳ ಬಗ್ಗೆ ಅರಿತು ಆಹಾರದಲ್ಲಿ, ಔಷಧಿಯಲ್ಲಿ ಬಳಸಿಕೊಂಡರೆ ನಮ್ಮ ಆರೋಗ್ಯವೂ ಚಿಗುರಿಕೊಂಡು ಬದುಕು ನಳನಳಿಸೀತು.

ಚಿಗುರೆಲೆ ಉತ್ತಮ ವೃದ್ಧಾಪ್ಯ ತಡೆ ಆಹಾರವಾಗಿ, ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಹಲವಾರು ರೋಗಗಳನ್ನೂ ನೈಸರ್ಗಿಕವಾಗಿ ಪರಿಹರಿಸಿಕೊಳ್ಳಬಹುದು.

ಎಲೆಯಲ್ಲಿರುವ ದ್ರವದ ಅಂಶ, ನಾರಿನಂಶ, ವಿಟಮಿನ್ಸ್‌ಗಳು, ಪೋಷಕಾಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ಒಗರು, ಖನಿಜಾಂಶಗಳು ನೇರವಾಗಿ ದೇಹವನ್ನು ಸೇರಿ ನವಚೈತನ್ಯವನ್ನು ನೀಡುತ್ತವೆ. ಅಲ್ಲದೇ ಚರ್ಮ ಒಣಗುವುದನ್ನು ತಡೆದು, ತೇವಾಂಶವನ್ನು ಕಾಯ್ದುಕೊಳ್ಳುತ್ತವೆ.

ಅದಕ್ಕಾಗೇ ಬಹಳ ಹಿಂದಿನಿಂದಲೇ ನಮ್ಮ ಹಿರಿಯರು ಮನೆಯ ಹಿತ್ತಲಲ್ಲಿ, ಅಕ್ಕಪಕ್ಕದಲ್ಲಿ ಹಲವಾರು ಔಷಧಿಯುಕ್ತ ಸಸ್ಯಗಳನ್ನು ನೆಟ್ಟು ಪೋಷಿಸಿ, ಆಹಾರವಾಗಿ ಹಾಗೂ ಔಷಧಿಯಾಗಿ ಉಪಯೋಗಿಸುತ್ತಿದ್ದರು. ಅವರ ಈ ಆಚರಣೆಯಲ್ಲಿ ವಿಜ್ಞಾನ ಅಡಗಿದೆ. ಅಂತಹ ಕೆಲವು ಔಷಧಿಯುಕ್ತ ಚಿಗುರೆಲೆಗಳ ಮಾಹಿತಿ ಇಲ್ಲಿದೆ:

* ತಿಮರೆ (ವಂದೆಲಗ)- ಜ್ಞಾನ ಹಾಗೂ ಕಬ್ಬಿಣಾಂಶ ವೃದ್ಧಿ.
* ಅಮೃತಬಳ್ಳಿ ಎಲೆ- ರೋಗ ನಿರೋಧಕ ಶಕ್ತಿ ವೃದ್ಧಿ.
* ಕಾಕೆಸೊಪ್ಪು ಅಥವಾ ಗಣಿಕೆ ಎಲೆ- ಕ್ಯಾಲ್ಸಿಯಂ ಕೊರತೆಗೆ ಉತ್ತಮ ಪರಿಹಾರ.
* ಭೃಂಗರಾಜದ (ಗರ್ಗ) ಎಲೆ- ಕಬ್ಬಿಣಾಂಶದ ಕಣಜ ಎಂದೇ ಕರೆಯಬಹುದು. ರಕ್ತಹೀನತೆಗೆ ಉತ್ತಮ ಪರಿಹಾರ.
* ಸಾಂಬಾರ ಎಲೆ (ಸಾಂಬ್ರಾಣಿ, ದೊಡ್ಡಪತ್ರೆ)- ಉಪ್ಪುಸಹಿತ, ಕಾಳುಮೆಣಸು ಸೇರಿಸಿ ಚೆನ್ನಾಗಿ ಜಗಿದು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿ ಮತ್ತು ಕಫ ನಿವಾರಣೆ. ಒಂದು ವಾರ ಇದರ ಹಸಿರೆಲೆಗಳನ್ನು ಸಲಾಡ್, ತಂಬುಳಿ, ಚಟ್ನಿ ಮತ್ತಿತರ ವ್ಯಂಜನಗಳ ಮೂಲಕ ಸೇವಿಸುತ್ತಾ ಬಂದರೆ ಕಫ ನಿವಾರಣೆ, ಕಾಮಾಲೆ ರೋಗಕ್ಕೆ ಉತ್ತಮ ಪರಿಹಾರ.
* ಮಾವಿನ ಚಿಗುರೆಲೆ- ಗಂಟಲು ಹಿಡಿತ ಸರಿಯಾಗಿ ಸ್ವರ ಸಹಜವಾಗುತ್ತದೆ. ಅತಿಸಾರ, ಆಮಶಂಕೆಗೆ ಉತ್ತಮ ಪರಿಹಾರ. ಮಾವಿನ ಹೂವನ್ನು ಜಗಿದು ನೀರಿನೊಂದಿಗೆ ಸೇವಿಸುವುದರಿಂದ ಹಲ್ಲುನೋವು, ವಸಡಿನ ರಕ್ತಸ್ರಾವ ಕಡಿಮೆಯಾಗುತ್ತದೆ.
* ಪೇರಳೆ (ಸೀಬೆ) ಚಿಗುರು, ಜಾಜಿ ಎಲೆಯ ಚಿಗುರು- ಚೆನ್ನಾಗಿ ಜಗಿದು ತಿನ್ನುವುದರಿಂದ ಬಾಯಿಹುಣ್ಣು, ವಸಡಿನ ರಕ್ತಸ್ರಾವ ಕಡಿಮೆ ಆಗುತ್ತದೆ. ಬಾಯಿ ದುರ್ಗಂಧ ನಾಶವಾಗುತ್ತದೆ.
* ದಾಳಿಂಬೆ ಚಿಗುರು- ಜಗಿದು ತಿನ್ನುವುದರಿಂದ ವಸಡಿನ ರಕ್ತಸ್ರಾವ ಕಡಿಮೆ ಆಗಿ ನರದೌರ್ಬಲ್ಯ ನಾಶ, ದೃಷ್ಟಿದೋಷ ಪರಿಹಾರ.
* ಹುಣಸೆ ಚಿಗುರು- ಮಜ್ಜಿಗೆಯೊಡನೆ ಜಗಿದು ಸೇವಿಸುವುದರಿಂದ ಮೂತ್ರಕಟ್ಟು ನಿವಾರಣೆ. ದಂಟಿನ ಸೊಪ್ಪಿನ ರಸ ತೆಗೆದು ಸೇವಿಸಿದರೆ ಕಬ್ಬಿಣಾಂಶ ಹೆಚ್ಚಿ ರೋಗನಿರೋಧಕ ಶಕ್ತಿ ವೃದ್ಧಿಸುವುದು.
* ಅರಳಿ ಚಿಗುರು- ಪಿತ್ತನಾಶಕ, ಕಫನಾಶಕ ಗುಣ ಹೊಂದಿರುವ ಇದು ಮಧುರ ರಸವುಳ್ಳ ವೃಕ್ಷ.
ಇದರ ಚಿಗುರಿನ ಸೇವನೆಯಿಂದ ರಕ್ತ ಶುದ್ಧಿ, ಚರ್ಮರೋಗ ನಿವಾರಣೆ ಆಗುತ್ತದೆ. ಚಿಗುರುಗಳನ್ನು ಕಲ್ಲು ಸಕ್ಕರೆಯೊಂದಿಗೆ ಸೇವಿಸಿದರೆ ನರಗಳ ದೌರ್ಬಲ್ಯ, ಅಶಕ್ತತೆ ನಿವಾರಣೆ. ದಿನಕ್ಕೆ ಎರಡು ಸಲ ಜಗಿದು ತಿನ್ನುವುದರಿಂದ ಮೂತ್ರದೋಷ ಹಾಗೂ ಉರಿಮೂತ್ರ ನಿವಾರಣೆ.
* ಪುದೀನ ಎಲೆ- ನಾಲಿಗೆಯ ರುಚಿಗ್ರಹಣ ಶಕ್ತಿ ಹೆಚ್ಚಳ, ರೋಗನಿರೋಧಕ ಶಕ್ತಿ ವೃದ್ಧಿ. ಪ್ರತಿ ದಿನ 4-5 ಪುದೀನ ಎಲೆಗಳನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸಿ ಬಾಯಿ ದುರ್ನಾತ ನಾಶ. ಹಲ್ಲು ಗಟ್ಟಿಯಾಗುತ್ತದೆ.
* ಬಿಲ್ವಪತ್ರೆ- ಜೀರಿಗೆಯೊಡನೆ ದಿನಕ್ಕೆ ಮೂರು ಬಾರಿ ಸೇವಿಸಿದರೆ, ಎದೆ ಉರಿ ಶಮನ, ನಾಲ್ಕು ಊಟದ ಚಮಚ ಬಿಲ್ವಪತ್ರೆ ರಸವನ್ನು ಹಸಿ ಹೊಟ್ಟೆಯಲ್ಲಿ ಬೆಳಿಗ್ಗೆ, ಸಂಜೆ ಸೇವಿಸುತ್ತಿದ್ದರೆ ಮಧುಮೇಹಕ್ಕೆ ಉತ್ತಮ ಪರಿಹಾರ. ಮೇದೋಜೀರಕಾಂಗ ಪುನಶ್ಚೇತನಗೊಳ್ಳುತ್ತದೆ. ಇನ್ಸುಲಿನ್ ದ್ರವ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
* ವೀಳ್ಯದೆಲೆ- ಶ್ರೇಷ್ಠ ಗುಣಗಳಿಂದ ಕೂಡಿದ ಉತ್ತಮ ಹಸಿರೆಲೆಯಿಂದ ಕಫ ನಾಶ, ಜೀರ್ಣಶಕ್ತಿ ವೃದ್ಧಿ. ವೀಳ್ಯದೆಲೆಯನ್ನು 4 ಕಾಳುಮೆಣಸು, ಉಪ್ಪಿನ ಹರಳಿನ ಜೊತೆ ಚೆನ್ನಾಗಿ ಜಗಿದು ತಿನ್ನುವುದರಿಂದ ಕಫ ನಾಶ. ವೀಳ್ಯದೆಲೆ, ತುಳಸಿ, ಸಾಂಬ್ರಾಣಿ, ಶುಂಠಿ, ಕಲ್ಲು ಸಕ್ಕರೆ, ಜೇನು, ಜೀರಿಗೆ, ಶುಂಠಿ ಜೊತೆ ಸೇರಿಸಿ ಸ್ವೀಟ್ ಬೀಡಾ ಮಾಡಿ ಊಟದ ನಂತರ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಕಫ ನಾಶ.
* ಕಹಿಬೇವು- ಔಷಧಿಗಳ ಆಗರ. ಪ್ರತಿ ದಿನ 2-3 ಹಸಿರೆಲೆಗಳನ್ನು ಹಸಿ ಹೊಟ್ಟೆಯಲ್ಲಿ ತಿನ್ನುವುದರಿಂದ (ಬೆಲ್ಲದ ಜೊತೆ) ರಕ್ತ ಶುದ್ಧಿಯಾಗಿ ರೋಗನಿರೋಧಕ ಶಕ್ತಿ ವೃದ್ಧಿ. ಕ್ರಿಮಿನಾಶಕ ಗುಣ ಹೊಂದಿದ ಈ ಎಲೆ ಜಗಿಯುವುದರಿಂದ ದಂತ ಕ್ಷಯ ನಿವಾರಣೆ. ಬೇವಿನ ಎಲೆಯ ರಸ ಸೇವನೆಯಿಂದ ನಿಶ್ಶಕ್ತಿ, ವಾಕರಿಕೆ, ನರ ದೌರ್ಬಲ್ಯ, ಕರುಳಿನ ಹುಳುಗಳ ನಾಶ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹಕ್ಕೆ ರಾಮಬಾಣ.
* ತುಳಸಿ ದಳ- ಬಾಯಿಯ ಕಶ್ಮಲ, ಕಫ ನಿವಾರಣೆ. ಇದು ವಾತಹರ, ವಿಷಹರವಾಗಿ ವರ್ತಿಸುತ್ತದೆ. ಜೊಲ್ಲುರಸ ಸ್ರವಿಸುತ್ತದೆ.

ಮೇಲಿನ ಬಹುತೇಕ ಚಿಗುರುಗಳನ್ನು ಕಾಯಿ, ಕಾಳುಮೆಣಸಿನೊಂದಿಗೆ ಅರೆದು ಮಜ್ಜಿಗೆ ಹಾಕಿ ತಂಬುಳಿ ಮಾಡಿಯೂ ಸೇವಿಸಬಹುದು. ಆರೋಗ್ಯಕ್ಕೆ ಅತಿ ಅವಶ್ಯವಾದ ಈ ಔಷಧ ಸಸ್ಯ ಸಂಪತ್ತನ್ನು ನಿರ್ಲಕ್ಷಿಸದೇ, ರಕ್ಷಿಸಿ ಭಕ್ಷಿಸುವುದು ಒಳ್ಳೆಯದು.

Comments are closed.