ಕರಾವಳಿ

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ : ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ಬಂದ ಮೆರವಣಿಗೆ

Pinterest LinkedIn Tumblr

ಮಂಗಳೂರು :ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಶುರುವಾಗಿದೆ. ಕ್ಷೇತ್ರದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ, ತ್ಯಾಗದ ಸಂಕೇತವಾದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕದ ಮಜ್ಜನ ಸಂಭ್ರಮ ಆರಂಭವಾಗಿದೆ.

ಅಪಾರ ಜಿನಭಕ್ತರ, ಸಾಧುಸಂತರ, ಲಕ್ಷಾಂತರ ಭಕ್ತರ ಸಮಾಗಮ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕುಡುಮ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಆರಂಭವಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ಚಂದ್ರನಾಥ ದೇವರು ಹಾಗೂ ತೀರ್ಥಂಕರರ ಮೆರವಣಿಗೆ ಶನಿವಾರ ನಡೆಯಿತು.

ಮೊದಲಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಚಂದ್ರನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಈ ಮೆರವಣಿಗೆಯನ್ನು ಉದ್ಘಾಟಿಸಲಾಯಿತು. ಗಜ, ವೃಷಭ ಸಮೇತವಾದ ವೈಭವದ ಈ ಮೆರವಣಿಗೆಯಲ್ಲಿ ದಿಗಂಬರ ಜೈನ ಮುನಿಗಳು ಭಾಗವಹಿಸಿದ್ದರು.
ಬಳಿಕ ರತ್ನಗಿರಿ ಬೆಟ್ಟದಲ್ಲಿ ಸುಮಾರು 35 ಪೂಜಾ ಪುರೋಹಿತರು ಬೇರೆ ಬೇರೆ ಕಡೆಗಳ ಬಸದಿಗಳಿಂದ ತಂದಿದ್ದ ಪ್ರಸಾದವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಾಂಗವಾಗಿ ನಡೆಯಲೆಂಬಂತೆ ಆಶೀರ್ವಾದವಾಗಿ ನೀಡಲಾಯಿತು.

ಈ ಸಂದರ್ಭ ಇಂದ್ರ ಪ್ರತಿಷ್ಠೆ, ಮಾವಿನ ತೋರಣದ ಧ್ವಜಾರೋಹಣ ಮುಹೂರ್ತ ನಡೆಯಿತು. ಕಾರ್ಕಳದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಈ ಎಲ್ಲಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್, ಡಾ. ನಿರಂಜನ್, ಪದ್ಮಲತಾ ಭಾಗವಹಿಸಿದ್ದರು

Comments are closed.