ಕರಾವಳಿ

ಧರ್ಮಸ್ಥಳದ ಸತ್ಕಾರ್ಯದ ಹೊನಲು ಸದಾ ನಮ್ಮ ನಾಡಿನಲ್ಲಿ ಹರಿಯುತ್ತಿರಲಿ : ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಕುಮಾರಸ್ವಾಮಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 10: ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ – ಚತುಷ್ಪಥ ರಸ್ತೆ ಪ್ರಥಮ ಹಂತದ ಉದ್ಘಾಟನೆ ಹಾಗೂ ಕೆರೆ ಸಂಜೀವಿನಿ ಕಾರ್ಯಕ್ರಮದ ಒಡಂಬಡಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕದಂತಹ ಅಪರೂಪದ ಪವಿತ್ರ ಕಾರ್ಯವೊಂದರಲ್ಲಿ ತುಂಬು ಧನ್ಯತಾ ಭಾವದಿಂದ ಭಾಗವಹಿಸುತ್ತಿದ್ದೇನೆ. ಈ ಅವಕಾಶ ಒದಗಿಸಿಕೊಟ್ಟ ಎಲ್ಲ ಹಿರಿಯರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ ಎಂದು ಹೇಳಿದರು.

ಅಪೂರ್ವ ಸಂಕಲ್ಪ ಶಕ್ತಿ ಮತ್ತು ಅನನ್ಯ ಧಾರ್ಮಿಕ ಪರಂಪರೆಯ ಮೂರ್ತ ರೂಪವಾಗಿ ಬಾಹುಬಲಿ ಸ್ವಾಮಿ ಇಲ್ಲಿ ರಾರಾಜಿಸಿದ್ದಾರೆ. ವಿಪ್ಲವಪೂರಿತ ಸಮಾಜಕ್ಕೆ ಶಾಂತಿ-ಸಮಚಿತ್ತಗಳೇ ದಿವ್ಯ ಔಷಧಿಗಳು ಎಂಬ ಸಂದೇಶ ಸಾರುತ್ತಿರುವ ಈ ಭವ್ಯ ಮೂರ್ತಿಗೆ ಮತ್ತೊಮ್ಮೆ ಭಕ್ತಿಪೂರ್ವಕ ನಮನಗಳು ಎಂದು ಕುಮಾರಸ್ವಾಮಿ ಹೇಳಿದರು.

ಧರ್ಮಸ್ಥಳದ ಈ ಸತ್ಕಾರ್ಯದ ಹೊನಲು ಸದಾ ನಮ್ಮ ನಾಡಿನಲ್ಲಿ ಹರಿಯುತ್ತಿರಲಿ. ಧಾರ್ಮಿಕ ಸಂಸ್ಥೆಯೊಂದು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಈ ಅಪೂರ್ವವಾದ ಉದಾಹರಣೆ ಇಡೀ ಜಗತ್ತಿಗೇ ಮಾದರಿಯಾಗಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದು ಅವರು ಹೇಳಿದರು.

ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮೊದಲ ಬಾರಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶ್ರೀ ವಿರೇಂದ್ರ ಹೆಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಕೈಗೊಂಡಿರುವ ಕೆರೆಗಳ ಕಾಯಕಲ್ಪ ಯೋಜನೆ ಅವರ ಮೊದಲ ಯೋಜನೆಯಂತೆಯೇ ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಕನಸನ್ನು ನನಸು ಮಾಡುತ್ತದೆ ಎಂದು ಅಚಲ ನಂಬಿಕೆ. ಏಕೆಂದರೆ ಧರ್ಮಸ್ಥಳದ ಕತೃತ್ವ ಶಕ್ತಿಗೆ ಮತ್ತು ತನ್ನ ಯೋಜನೆಗಳನ್ನು ಅದು ಅನುಷ್ಠಾನಗೊಳಿಸುವ ರೀತಿಗೆ ಸರಿಸಾಟಿ ಇಲ್ಲ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮನಿವೇದನೆ ಮಾಡಿಕೊಂಡ ಕುಮಾರಸ್ವಾಮಿ:

ಧರ್ಮಸ್ಥಳದ ವಿಷಯದಲ್ಲಿ ಹಿಂದೊಮ್ಮೆ ನಾನು ಅಪಚಾರ ಮಾಡಿದ್ದೇನೆ’ ನಾವು ಜನಪ್ರತಿನಿಧಿಗಳು ಕೆಲವೊಂದು ರಾಜಕೀಯ ವಿಚಾರ ಸಂಬಂಧಿಸಿ ಅಪಚಾರ ನಡೆಸಿದ್ದೇವೆ ಎಂದು ಕುಮಾರಸ್ವಾಮಿ ಅವರು ಆಣೆ ಪ್ರಮಾಣದ ವಿಷಯ ನೆನಪಿಸಿಕೊಂಡು ಆತ್ಮನಿವೇದನೆ ಮಾಡಿಕೊಂಡರು.

ಅಪಚಾರ ನಡೆಸಿದರೆ ಯಾವ ಸ್ಥಾನದಲ್ಲಿದ್ದರೂ ಮಂಜುನಾಥ ಸ್ವಾಮಿ ಬಿಡುವುದಿಲ್ಲ, ಮಂಜುನಾಥ ಸ್ವಾಮಿಯ ಜತೆ ಯಾರೂ ಚೆಲ್ಲಾಟವಾಡಬಾರದು ಎಂದು ನನಗೂ ಅನುಭವವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಡ ವರ್ಗಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ : ಪೇಜಾವರ ಶ್ರೀ

ಸಿಎಂ ಕುಮಾರಸ್ವಾಮಿ ಹಾಗೂ ಸಚಿವರುಗಳಿಗೆ ಸನ್ಮಾನ ಮಾಡಿದ ಪೇಜಾವರ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪೇಜಾವರ ಶ್ರೀಗಳು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಮ ಬಡ ವರ್ಗಕ್ಕೆ ಕುಮಾರಸ್ವಾಮಿ ಉತ್ತಮ ಕೊಡುಗೆ ನೀಡಿದ್ದಾರೆ, ರಾಜ್ಯದ ಅಭವೃದ್ಧಿ ಚೆನ್ನಾಗಿ ನಡೆಸಲಿ, ಆಧ್ಯಾತ್ಮಿಕ ಹಾಗೂ ಕೃಷಿ ಕ್ಷೇತ್ರಕ್ಕೂ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಪೇಜಾವರ ಅವರು ಹೇಳಿದರು.

ಧರ್ಮಸ್ಥಳಕ್ಕೆ ಹರಿದು ಬರುತ್ತಿದೆ ಜನಸಾಗರ : ಲಕ್ಷಾಂತರ ಭಕ್ತರ ಸಮಾಗಮ

ಅಪಾರ ಜಿನಭಕ್ತರ, ಸಾಧುಸಂತರ, ಲಕ್ಷಾಂತರ ಭಕ್ತರ ಸಮಾಗಮ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕುಡುಮ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಆರಂಭವಾಗಿದೆ. ಶ್ರೀ ಕ್ಷೇತ್ರದ ರತ್ನಗಿರಿ ಬೆಟ್ಟದಲ್ಲಿ ನಡೆಯಲಿರುವ ಬಾಹುಬಲಿ ಮಜ್ಜನ ಸಾಧು ಸಂತರು, ಜೈನ ಮುನಿಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ. ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಮೇಳೈಸಿದೆ. ವೈರಾಗ್ಯದ, ತ್ಯಾಗದ, ಸಂಯಮದ, ಸಹನೆಯ ಸಾಕಾರಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಸಾಧು ಸಂತರಿಂದ ಧರ್ಮ ಸಂದೇಶ :

ಫೆಬ್ರವರಿ 19ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ದೇಶ ಹಾಗೂ ವಿದೇಶದಿಂದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಮಹಾಮಸ್ತಕಾಭಿಷೇಕದ ಮೊದಲ ದಿನದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಸಾಧು ಸಂತರ ಸಮಾವೇಶ ನಡೆಯಿತು.

ಈ ಸಮಾವೇಶದಲ್ಲಿ ಭಾಗವಹಿಸಿರುವ ನಾಡಿನ ಶ್ರೇಷ್ಠ ಸಾಧು ಸಂತರು, ಜೈನ ಮುನಿಗಳು ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ.

ದೇವೇಗೌಡರು ಜೈನ ಧರ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ :ಡಾ. ವಿರೇಂದ್ರ ಹೆಗ್ಗಡೆ

ಸಂತ‌ ಸಮ್ಮೇಳನವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉದ್ಘಾಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಗೈರು ಹಾಜರಾಗಿದ್ದರು. ದೊಡ್ಡ ಗೌಡರ ಅನುಪಸ್ಥಿತಿಯನ್ನು ನೆನಪಿಸಿಕೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ದೇವೇಗೌಡರು ಜೈನ ಧರ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ. ಶ್ರವಣಬೆಳಗೊಳದ ಎಲ್ಲಾ ಕೈಕಂಕರ್ಯಗಳನ್ನು ತಾವೇ ವಹಿಸಿದ್ದರು. ಅವರ ಅನುಪಸ್ಥಿತಿ ದೊಡ್ಡ ಕೊರತೆ ಎಂದು ನೆನಪಿಸಿಕೊಂಡಿದ್ದಾರೆ.

ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ : ಸಾಧು ಸಂತರಿಂದ ಶ್ಲಾಘನೆ

ಸಾಧು ಸಂತರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಸಾಧು ಸಂತರು ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಸಂತ ನುಡಿಗಳ ಮೂಲಕ ಆರಂಭಿಸುತ್ತಿರೋದು ಹೆಗ್ಗಡೆಯವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದರು.

Comments are closed.