ಕರಾವಳಿ

ಪೊಲೀಸ್ ಪೇದೆಯಿಂದ ನಾಟ ಕಳ್ಳ ಸಾಗಾಣೆ: 5 ಲಕ್ಷಕ್ಕೂ ಅಧಿಕ ಮೌಲ್ಯದ ನಾಟ ವಶ

Pinterest LinkedIn Tumblr


ಕಾರವಾರ: ಅಪರಾದ ತಡೆಯಬೇಕಾದ ಪೊಲೀಸರೇ ಅಡ್ಡ ದಾರಿ ಹಿಡಿದು ಕಾಡಿನಲ್ಲಿ ಬೆಳೆದ ನಾಟಗಳನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾ ತಾಲೂಕು ಗುಪ್ತದಳ ವಿಭಾಗದ ಗುರುರಾಜ್ ನಾಟಗಳನ್ನು ಮಾರುತ್ತಿದ್ದ ಪೊಲೀಸ್ ಪೇದೆ. ಅಧಿಕಾರಿಗಳು ದಾಳಿಯನ್ನು ಅರಿತ ಗುರುರಾಜ್ ಪರಾರಿಯಾಗಿದ್ದು, ಆತನ ಸಹಚರ ಉದಯ್ ಸಿಕ್ಕಿಬಿದ್ದಿದ್ದಾನೆ.

ಜೋಯಿಡಾ ಪೊಲೀಸ್ ಠಾಣೆಯಲ್ಲಿ ಏಳು ವರ್ಷಗಳಿಂದ ಪೇದೆಯಾಗಿದ್ದ ಗುರುರಾಜ್, ಕೆಲವು ವರ್ಷಗಳ ಹಿಂದೆ ಗುಪ್ತದಳ ವಿಭಾಗಕ್ಕೆ ವರ್ಗವಾಗಿದ್ದ. ಜೋಯಿಡಾದಲ್ಲಿ ಸಿಗುವ ಅತ್ಯಂತ ದುಬಾರಿ ಬೆಲೆಯ ಸೀಸಂ ಹಾಗೂ ಸಾಗುವಾನಿ ನಾಟಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಇದರಿಂದಾಗಿ ಸಹಚರ ಉದಯ್ ಜೊತೆಗೆ ಸೇರಿ ಮರಗಳನ್ನು ಕಡಿದು ಪೀಠೋಪಕರಣಗಳನ್ನು ತಯಾರಿಸಿ, ಇಲ್ಲವೇ ಹಾಗೆಯೇ ಮಾರಾಟ ಮಾಡುತ್ತಿದ್ದ.

ಗುರುರಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸ್ ಅಧಿಕಾರಿಗಳು ಆತನಿಗೆ ತಿಳಿಯದಂತೆ ತನಿಖೆ ಆರಂಭಿಸಿದ್ದರು. ಗುರುರಾಜ್ ವಸತಿ ನಿಲಯದಲ್ಲಿ ನಾಟಗಳು ಇರುವುದನ್ನು ಖಚಿತ ಪಡಿಸಿಕೊಂಡ ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ಅವರು ಡಿಸಿಐಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಇಂದು ದಾಳಿ ಮಾಡಿದ್ದಾರೆ. ಈ ವೇಳೆ ವಸತಿ ನಿಲಯದಲ್ಲಿ ಬಚ್ಚಿಟ್ಟಿದ್ದ 5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ನಾಟಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಗುರುರಾಜ್‍ಗೆ ಸಹಾಯ ಮಾಡುತ್ತಿದ್ದ ಉದಯ್‍ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಗುರುರಾಜ್ ಅರಣ್ಯ ಸಂಪತ್ತನ್ನೇ ತನ್ನ ಬಂಡವಾಳವಾಗಿ ಪರಿವರ್ತಿಸಿಕೊಂಡಿದ್ದ. ತನ್ನದೇ ಆದ ತಂಡ ಮಾಡಿಕೊಂಡು ಕಾಡಿನಲ್ಲಿ ಅಮೂಲ್ಯ ಮರಗಳನ್ನು ಕಟಾವು ಮಾಡಿ ಮಾರಿ ಹಣ ಗಳಿಸುತ್ತಿದ್ದ ಎಂದು ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ತಿಳಿಸಿದ್ದಾರೆ.

ಈ ಕುರಿತು ಜೋಯಿಡಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಗುರುರಾಜ್ ಪತ್ತೆಯಾಗಿ ಬಲೆ ಬೀಸಿದ್ದಾರೆ.

ಪೊಲೀಸ್ ವಸತಿ ನಿಲಯಕ್ಕೆ ದಾಳಿ ಇಟ್ಟು ಈ ಮಟ್ಟದ ನಾಟಗಳನ್ನು ವಶಕ್ಕೆ ಪಡೆದಿದ್ದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದೆ ಹಳಿಯಾಳದಲ್ಲಿ ಅರಣ್ಯ ಇಲಾಖೆ ಪೊಲೀಸ್ ಡಿ.ಆರ್ ವ್ಯಾನ್‍ನಲ್ಲಿ ನಾಟ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದರು. ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

Comments are closed.