ಕರ್ನಾಟಕ

12 ವರ್ಷಗಳ ಹಿಂದೆ ನನ್ನಿಂದ ಅಪಚಾರವಾಗಿದೆ: ಧರ್ಮಸ್ಥಳದಲ್ಲಿ ಕುಮಾರಸ್ವಾಮಿ

Pinterest LinkedIn Tumblr


ಧರ್ಮಸ್ಥಳ: ನನ್ನಿಂದ ಅಪಚಾರವಾಗಿದೆ ಎಂದು 12 ವರ್ಷಗಳ ಹಿಂದಿನ ಘಟನೆಯನ್ನು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ.

ಧರ್ಮಸ್ಥಳದ ಬಾಹುಬಲಿ ಮಜ್ಜನದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಅಪಚಾರ ಎಸಗಿದ್ರೆ ಧರ್ಮಸ್ಥಳ ಮಂಜುನಾಥಸ್ವಾಮಿ ಬಿಡಲ್ಲ. ಮಂಜುನಾಥಸ್ವಾಮಿ ಜೊತೆ ಚೆಲ್ಲಾಟವಾಡಬಾರದು ಎಂದು ಅವರು ಹೇಳಿದ್ರು.

ಕ್ಷೇತ್ರದಲ್ಲಿ ನನ್ನಿಂದ ಅಪಚಾರವಾಗಿದೆ. ರಾಜಕಾರಣದಲ್ಲಿ ಮಂಜುನಾಥನನ್ನು ಎಳೆದು ತಂದು ತಪ್ಪು ಮಾಡಿದ್ದೆ. ಆದ್ರೆ ಆ ಬಳಿಕ ಮಂಜುನಾಥ ಸ್ವಾಮಿ ಜೊತೆ ಚೆಲ್ಲಾಟವಾಡಬಾರದೆಂಬ ಅನುಭವವಾಗಿದೆ ಎಂದು ತಿಳಿಸಿದ್ರು.

12 ವರ್ಷಗಳ ಹಿಂದೆ ಅಂದ್ರೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆಣೆ ಪ್ರಮಾಣ ಮಾಡಿದ್ದೆ. ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಅಲ್ಲದೇ ಯಡಿಯೂರಪ್ಪ ಅವರಿಗೂ ಶಿಕ್ಷೆಯಾಗಿದ್ದು, ಆ ಸಂದರ್ಭದಲ್ಲಿ ಅವರ ಸರ್ಕಾರ ಬಿದ್ದೋಗಿತ್ತು ಎಂದು ಹೇಳುವ ಮೂಲಕ ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಏನಿದು ಆಣೆ ಪ್ರಕರಣ?
ಬಿಜೆಪಿ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದ ಬಳಿಕ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡತೊಡಗಿದ್ದರು. ಯಡಿಯೂರಪ್ಪನವರೇ ಸುಳ್ಳು ದಾಖಲೆಗಳನ್ನು ಬಿಡಬೇಡಿ. ನಿಮಗೆ ಏನು ಬೇಕೋ ಅದನ್ನು ನಾನು ಮಾಡಿಕೊಡುತ್ತೇನೆ. ಅಷ್ಟೇ ಅಲ್ಲ ನಿಮಗೆ ತಿಂಗಳಿಗೆ ಎಷ್ಟು ಹಣ ಬೇಕು ಅಂತ ಹೇಳಿ ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಭರವಸೆಯೊಂದಿಗೆ ತಮ್ಮ ಆಪ್ತರೊಬ್ಬರ ಮೂಲಕ ಯಡಿಯೂರಪ್ಪ ಸಂಧಾನಕ್ಕಾಗಿ ಅಂಗಲಾಚಿರುವುದಾಗಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

ಎಚ್‍ಡಿಕೆಯ ಈ ಬಾಂಬ್ ಬಳಿಕ ಬಿಎಸ್ ಯಡಿಯೂರಪ್ಪ, ಪತ್ರಿಕೆಗಳಲ್ಲಿ ‘ಗೌರವಾನ್ವಿತ ಮಾಜಿ ಕುಮಾರಸ್ವಾಮಿಯವರಿಗೊಂದು ಬಹಿರಂಗ ಪತ್ರ’ ಎಂದು ಜಾಹೀರಾತು ನೀಡುವ ಮೂಲಕ ಪ್ರತಿಕ್ರಿಯೆ ನೀಡಿ ಬಹಿರಂಗ ಸವಾಲು ಎಸೆದಿದ್ದರು. ಮಾಜಿ ಮುಖ್ಯಮಂತ್ರಿಯೊಬ್ಬರು ಇಷ್ಟೊಂದು ಘೋರ ಸುಳ್ಳನ್ನು ಹೇಳಬಹುದು ಎನ್ನುವುದನ್ನು ನಾನು ನಂಬಲು ಸಾಧ್ಯವಿಲ್ಲ. ಸಾವಿರ ಸುಳ್ಳನ್ನು ಹೇಳಿ ಅದನ್ನು ಸತ್ಯ ಮಾಡಬಹುದೆಂದು ನೀವು ನಂಬಿದ ಹಾಗಿದೆ. ನನ್ನ ಮತ್ತು ನಿಮ್ಮ ಮಾತುಗಳನ್ನು ದೇಶದ ಜನರು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದ್ದರು.

ಸಂಧಾನಕ್ಕಾಗಿ ತನ್ನನ್ನು ಕೇರಳಕ್ಕೆ ಆಹ್ವಾನಿಸಿದ್ದಾರೆ ಎಂಬ ಹೇಳಿಕೆಯ ಸತ್ಯಾಸತ್ಯತೆ ರಾಜ್ಯದ ಜನರಿಗೆ ತಿಳಿಸುವ ಅಗತ್ಯವಿದೆ. ನಾನು ದೈವ ಭಕ್ತನಾಗಿದ್ದು, ನೀವು ದೈವ ಭಕ್ತರಾಗಿದ್ದೀರಿ. ನಾವಿಬ್ಬರು ಆರೋಪ, ಪ್ರತ್ಯಾರೋಪ ಮಾಡಿದರೂ ಕೋರ್ಟ್‍ನಲ್ಲಿ ಇದು ಸಾಬೀತಾಗಬಹುದು, ಆಗದೇ ಇರಬಹುದು. ಹೀಗಾಗಿ ನ್ಯಾಯ ದೇಗುಲ ಎಂದು ಹೆಸರು ಪಡೆದಿರುವ ಧರ್ಮಸ್ಥಳಕ್ಕೆ ಬನ್ನಿ ಅಲ್ಲಿ. ಆಣೆ ಪ್ರಮಾಣ ಮಾಡೋಣ. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಾರೋ ಅದು ಮಂಜುನಾಥನಿಗೆ ಬಿಟ್ಟಿದ್ದು ಎಂದು ಹೇಳಿ ಬಹಿರಂಗ ಸವಾಲು ಎಸೆದಿದ್ದರು. ಈ ಸವಾಲನ್ನು ಸ್ವೀಕರಿಸಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.

ಆಣೆ ಪ್ರಮಾಣದ ಮಾತಿನ ಬಳಿಕ ಇಬ್ಬರು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದಿದ್ದರು. ಆದ್ರೆ ಆಣೆ ಪ್ರಮಾಣ ಮಾಡಿರಲಿಲ್ಲ. ಆ ಸಂದರ್ಭದಲ್ಲಿ ಆಣೆ ಪ್ರಮಾಣ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

Comments are closed.