ಕರಾವಳಿ

ಮೂಳೆ ಸೆಟೆಯುವಿಕೆ ಹಾಗೂ ಕುಂಟುತನದ ಬಗ್ಗೆ ಸಂಪೂರ್ಣ ವಿವರ

Pinterest LinkedIn Tumblr

ಕಳೆದ ಕೆಲವು ದಶಕಗಳಿಂದ ಆಗುತ್ತಿರುವ ಸಾಮಾಜಿಕ ಹಾಗೂ ವೈದ್ಯಕೀಯ ಬದಲಾವಣೆಗಳ ಒಂದು ಪ್ರಮುಖ ಪರಿಣಾಮ ಮನುಷ್ಯನ ಸರಾಸರಿ ಆಯುಷ್ಯದಲ್ಲಿ ಏರಿಕೆ. ಒಟ್ಟು ಜನಸಂಖ್ಯೆಯಲ್ಲಿ ವಯಸ್ಕರ ಸಂಖ್ಯೆ ಹೆಚ್ಚಿದಂತೆ ಅವರ ವೈದ್ಯಕೀಯ ಆರೋಗ್ಯದ ಅವಶ್ಯಕತೆಗಳು ಹೆಚ್ಚುತ್ತಿವೆ. ಕೀಲು ಹಾಗೂ ಮೂಳೆರೋಗ ತಜ್ಞರಲ್ಲಿ ಬರುವ ಹೆಚ್ಚಿನ ಸಂಖ್ಯೆಯ ರೋಗಿಗಳ ಪ್ರಮುಖ ಸಮಸ್ಯೆ ಸವೆತ ಅಥವಾ ಆರ್ಥೈಟೀಸ್‌ನಿಂದ ಆಗುವ ಮಂಡಿಕೀಲಿನ ನೋವು, ಸೆಟೆಯುವಿಕೆ ಹಾಗೂ ಕುಂಟುತನ.

1. ಮಂಡಿಕೀಲು ಸವೆಯುವುದೇಕೆ?
ಪ್ರತಿ ಬಾರಿಯೂ ಹೆಜ್ಜೆಯಿಡುವಾಗ ಶರೀರದ ಮುಂಚೂಣಿಯಲ್ಲಿರುವ ಪ್ರಮುಖ ಭಾಗ ಮಂಡಿ. ಶರೀರದ ಎರಡು ಅತಿ ಬಲಿಷ್ಠ ಹಾಗೂ ಉದ್ದವಾದ ಮೂಳೆಗಳಾದ ತೊಡೆಮೂಳೆ (Femur) ಹಾಗೂ ಕಾಲಿನ ಮೂಳೆಗಳ (Tibia) ನಡುವೆ ಏರ್ಪಟ್ಟಿರುವ ಮಂಡಿಗೆ, ಈ ಮೂಳೆ ಉದ್ದದ ಸನ್ನೆ ಕೈ ಕಾರಣ ಅತಿ ಹೆಚ್ಚಿನ ಘರ್ಷಣೆ ಉಂಟಾಗುತ್ತದೆ. ಶರೀರದಲ್ಲಿ ಅತಿಹೆಚ್ಚು ಆಘಾತಕ್ಕೀಡಾಗುವ ಕೀಲು ಸಹ ಮಂಡಿ. ಇದಲ್ಲದೆ ವಯಸ್ಸಾದಂತೆ ಅದರಲ್ಲೂ ಮಹಿಳೆಯಲ್ಲಿ ಹಾರ್ಮೋನುಗಳ ಸ್ರವಿಸುವಿಕೆಯ ಬದಲಾವಣೆಯ ಕಾರಣ ಕೀಲುಗಳು ಸಡಿಲವಾಗಿ ಶರೀರದ ಭಾರದ ಹರಿಯುವಿಕೆಯಲ್ಲಿ ಏರುಪೇರಾಗುತ್ತದೆ. ಈ ಕಾರಣಗಳಿಂದ ಮಂಡಿಕೀಲಿನ ಸವೆತದ ಸಮಸ್ಯೆ ಹೆಚ್ಚು ಕಂಡುಬರುತ್ತದೆ.

ಕೀಲುಗಳ ಸವೆತ ಒಂದು ಸ್ವಾಭಾವಿಕ ಕ್ರಿಯೆ. ಅದನ್ನು ಖಾಯಿಲೆ ಎನ್ನುವುದಕ್ಕಿಂತ ಶರೀರದ ಒಂದು ಸಹಜ ಬದಲಾವಣೆಗಳಲ್ಲಿ ಒಂದು ಎನ್ನುವುದು ಲೇಸು. ಆದರೂ ಇದು ನೋವು ಕುಂಟುತನ ಹಾಗೂ ನಿಷ್ಕ್ರಿಯತೆ ಉಂಟುಮಾಡುವುದರಿಂದ ಇದನ್ನು ನಿವಾರಿಸಲುವೈದ್ಯಕೀಯ ಸಲಹೆ ಸೂಕ್ತ.

2. ಆರ್ಥೈಟೀಸ್ ಔಷಧದಿಂದ ಗುಣಪಡಿಸಬಹುದೇ?
ಆರ್ಥೈಟೀಸ್‌ನಲ್ಲಿ ಕೀಲುಗಳ ಹೊರಕವಚವಾದ ಕಾರ್ಟಿಲೇಜ್‌ಗೆ ಧಕ್ಕೆಯಾಗಿರುತ್ತದೆ. ಶರೀರದ ಬಹುತೇಕ ಅವಯವಗಳು ಹಾನಿಯಾದರೆ ಮತ್ತೆ ಪುನಃವೃದ್ಧಿಯಾಗುತ್ತವಾದರೂ, ಕಾರ್ಟಿಲೇಜ್ ವೃದ್ಧಿಯಾಗುವುದಿಲ್ಲ. ಈ ಕಾರಣದಿಂದ ಯಾವುದೇ ಔಷಧದಿಂದ ಈ ಜೀವಕೋಶಗಳನ್ನು ಶರೀರದಲ್ಲಿ ಮತ್ತೆ ಚಿಗುರಿ ಬೆಳೆಯುವಂತೆ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಜಾಹೀರಾತುಗಳಲ್ಲಿ ಕಂಡುಬರುವ ‘ಆರ್ಥೈಟೀಸ್‌ಗೆ ಮದ್ದು’ ಒಂದು ಮಿಥ್ಯೆ. ನೋವು ನಿವಾರಕ ಹಾಗೂ ಉರಿಯೂತ ನಿವಾರಕ (Anti inflammatory) ಔಷಧಗಳಿಂದ ನೋವಿನ ಪ್ರಮಾಣವನ್ನು ಕಡಿಮೆಮಾಡಿ ನಡೆದಾಡಲು ಸಹಾಯ ಮಾಡಬಹುದು.

3. ಔಷಧ ಮತ್ತು ಶಸ್ತ್ರಚಿಕಿತ್ಸೆಗಳಿಗಿಂತ ಬೇರೆ ವಿಧಾನವಿದೆಯೇ?
ಮಂಡಿ ಸವೆತವನ್ನು ನಿವಾರಿಸಲು ಸಾಧ್ಯವಾಗದಿದ್ದರೂ, ಅದರಿಂದ ಆಗುವ ನೋವು ಹಾಗೂ ಸೆಟೆಯುವಿಕೆಯನ್ನು ಕಡಿಮೆಮಾಡಲು ನಿಯಮಿತ ವ್ಯಾಯಾಮ ಹಾಗೂ ಯೋಗ ಸಹಕಾರಿಯಾಗಬಹುದು. ಮಂಡಿಗೆ ಹಾಕಿಕೊಳ್ಳುವ ಬೆಲ್ಟ್ (Knee cap) ಒಂದು ಉತ್ತಮ ಸಾಧನ. ನೋವುಂಟು ಮಾಡುವ ಚಟುವಟಿಕೆಗಳನ್ನು (ಉದಾ: ನೆಲದ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವುದು, ಎತ್ತರದ ಮೆಟ್ಟಿಲುಗಳನ್ನು ಏರುವುದು ಇತ್ಯಾದಿ) ಕಡಿಮೆ ಮಾಡಬೇಕು. ನಿಮ್ಮ ಸಮೀಪದ ಫಿಸಿಯೋಥೆರಪಿಸ್ಟ್ ನಿಮಗೆ ವ್ಯಾಯಾಮಗಳ ಆಯ್ಕೆಯಲ್ಲಿ ಸಹಾಯ ಮಾಡುತ್ತಾರೆ.

4. ಶಸ್ತ್ರಚಿಕಿತ್ಸೆಯ ಆಯಾಮ ಏನು? ಯಾವ ಶಸ್ತ್ರಚಿಕಿತ್ಸೆ ಉತ್ತಮ?
ಹೆಚ್ಚುಕಾಲ ನೋವು ನಿವಾರಕ ಔಷಧಗಳ ಸೇವನೆಯಿಂದ ಮೂತ್ರಪಿಂಡ ವೈಫಲ್ಯ, ಗ್ಯಾಸ್ಟ್ರಿಕ್ ಮುಂತಾದ ಅಡ್ಡ ಪರಿಣಾಮಗಳಾಗುತ್ತವೆ. ಆದ್ದರಿಂದ ನೋವು ಹಾಗೂ ಸೆಟೆಯುವಿಕೆ ಹೆಚ್ಚಾದಾಗ ಮಂಡಿಕೀಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಒಳಿತು. ಆರ್ಥೋಸ್ಕೊಪ್ ಮುಖಾಂತರ ಕೀಲು ಸ್ವಚ್ಛಗೊಳಿಸಿ ಮೇಲ್ಪದರವನ್ನು ನಯವಾಗಿಸಲು ಪ್ರಯತ್ನಿಸಬಹುದು. ಸ್ವಲ್ಪಮಟ್ಟಿಗೆ ಹಾಗೂ ಕೆಲವು ಕಾಲ ಇದರ ಪರಿಣಾಮ ಇರಬಹುದಾದರೂ ಮತ್ತೆ ನೋವು ಹಾಗೂ ಸೆಟೆಯುವಿಕೆ ಮರುಕಳಿಸುವ ಸಾಧ್ಯತೆ ಹೆಚ್ಚು. ಮಂಡಿಕೀಲಿನ ಬದಲಾವಣೆ ಇದಕ್ಕೆ ದೀರ್ಘಬಾಳಿಕೆಯಪರಿಹಾರವಾಗಿರುತ್ತದೆ.

5. ಕೀಲು ಜೋಡಣೆಯ ಶಸ್ತ್ರಚಿಕಿತ್ಸೆಯೆಂದರೇನು?
ಮಂಡಿಯಲ್ಲಿ ಸವೆದಿರುವ ಮೇಲ್ಪದರವನ್ನು ತೆಗೆದು ಅದರ ಸ್ಥಳದಲ್ಲಿ ಲೋಹ ಮತ್ತು ಪಾಲಿಥೀನ್ ನ ಭಾಗಗಳನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಬೆನ್ನಿಗೆ ಕೊಡುವ ಸಣ್ಣ ಅರಿವಳಿಕೆ (Epidural) ನಿಂದ ಅಥವಾ ಸಂಪೂರ್ಣಅರಿವಳಿಕೆ (General Anaesthesia) ದಿಂದಲೂ ಮಾಡಬಹುದು. ಶಸ್ತ್ರಚಿಕಿತ್ಸೆಗೆ ಮುಂಚೆ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ ನಂತರ ನಿಯಮಿತ ಫಿಸಿಯೋಥೆರಪಿಅವಶ್ಯ. ಕೀಲುಜೋಡಣೆಯ ನಂತರ ನೋವು ಬಹಳಷ್ಟುಕಡಿಮೆಯಾಗಿ ಚಲನೆ ಸಾಕಷ್ಟು ವೃದ್ಧಿಯಾಗುತ್ತದೆ. ಕೃತಕ ಕೀಲಿನ ಸರಾಸರಿ ಆಯಸ್ಸು ಸುಮಾರು 15 ವರ್ಷಗಳಾಗಿದ್ದು ಸವೆದು ಹೋದರೆ ಮತ್ತೆ ಬದಲಾಯಿಸಬಹುದು. ಶಸ್ತ್ರಚಿಕಿತ್ಸೆಯ ನಂತರ ಉಂಟಾಗಬಹುದಾದಂತ ಕೆಲವು ಸಮಸ್ಯೆಗಳಾದ ಗಾಯದ ಸೋಂಕು (Infection) ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿಗಳನ್ನು ಸೂಕ್ತ ಮುಂಜಾಗರೂಕತೆಯಿಂದ ತಡೆಗಟ್ಟಬಹುದು.

6. ಶಸ್ತ್ರಚಿಕಿತ್ಸೆಯ ನಂತರದ ಜೀವನ ಹೇಗಿರುತ್ತದೆ?
ಆರ್ಥೈಟೀಸ್‌ನ ನೋವು ಸಾಕಷ್ಟು ಮಟ್ಟಿಗೆ ಕಡಿಮೆಯಾಗಿ ನಡಿಗೆ ಹಾಗೂ ಚಲನೆ ಸುಲಭವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳು, ಮನೆಗೆಲಸ, ವಾಹನ ಚಾಲನೆ, ವಾಕಿಂಗ್, ಲಘು ಜಾಗಿಂಗ್ ಕೆಲವು ನಿರ್ದಿಷ್ಟ ವ್ಯಾಯಾಮಗಳು, ಲೈಂಗಿಕ ಕ್ರಿಯೆ ಎಲ್ಲವನ್ನೂ ಅಡಚಣೆಯಿಲ್ಲದೆ ಮಾಡಬಹುದು. ನೆಲದ ಮೇಲೆ ಕುಕ್ಕರುಗಾಲಿನಲ್ಲಿ ಕೂರುವುದು, ಟೆನಿಸ್‌ನಂತಹ ಹೆಚ್ಚು ಒತ್ತಡ ಬೀಳುವ ಆಟಗಳನ್ನು, ಕ್ರಿಯೆಗಳನ್ನುಮಾಡದಿರುವುದು ಉತ್ತಮ.

Comments are closed.