ಕರಾವಳಿ

ಗೃಹ ಬಳಕೆ ಉತ್ಪನ್ನಗಳೊಂದಾದ ಟೂತ್‌ಪಿಕ್‌ನಿಂದ ಆಗುವ ಉಪಯೋಗಗಳು

Pinterest LinkedIn Tumblr

ಹಲ್ಲಿನ ಸಂದುಗಳಲ್ಲಿ ಕುಳಿತಿರುವ ಕೊಳೆಯನ್ನು ತೆಗೆಯಲು ಬಳಸುವ ಟೂತ್‌ಪಿಕ್‌ನ ಉಪಯೋಗಗಳು ಹಲವಾರು ಇವೆ. ಅದರಲ್ಲೂ ಗೃಹ ಬಳಕೆಗೆ ಇದು ಅತ್ಯಂತ ಉಪಯೋಗಕಾರಿಯಾಗಿದೆ. ಚೂಪು ಮೊನೆಯ, ಸಪೂರ ಆಕಾರದ ಮತ್ತು ಹಗುರವಾಗಿರುವ ಈ ಟೂತ್‌ಪಿಕ್‌ನ ಕೆಲವು ಉಪಯೋಗಗಳನ್ನು ನೋಡಿದರೆ ನೀವೇ ಅಚ್ಚರಿಗೊಳ್ಳುವಿರಿ.

ಮನೆ ಅಲಂಕಾರದ ಬಗ್ಗೆ ವಿಶೇಷ ಕಾಳಜಿ ಇರುವವರಿಗೂ ಇದು ಹೆಚ್ಚು ಉಪಯೋಗವಾಗುವ ವಸ್ತುವಾಗಿದೆ.ಮನೆಯನ್ನು ಸ್ವಚ್ಛ ಮಾಡುವುದರಿಂದ ತೊಡಗಿ, ವಸ್ತುಗಳ ಜೋಡಣೆಯವರೆಗೂ ಇದರ ಬಳಕೆಯಾಗುತ್ತದೆ. ಇದರ ಕೆಲವು ಉಪಯೋಗಗಳು ಇಲ್ಲಿವೆ.

ಶವರ್ ಹೆಡ್ ಸ್ವಚ್ಛಗೊಳಿಸುತ್ತದೆ : ಬಾತ್‌ರೂಮ್‌ನಲ್ಲಿರುವ ಶವರ್ ಹೆಡ್‌ಅನ್ನು ಒಂದು ರಾತ್ರಿ ವಿನಿಗರ್ ಮತ್ತು ನೀರಿನ ಮಿಶ್ರಣದಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಟೂತ್‌ಪಿಕ್‌ನಿಂದ ಅದರ ತೂತುಗಳನ್ನು ಸ್ವಚ್ಛಗೊಳಿಸಿ. ಇದರಿಂದ ಶವರ್‌ನಲ್ಲಿ ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿದು ಬರುತ್ತದೆ.

ರಿಮೋಟ್ ಕಂಟ್ರೋಲ್ ಶುಚಿ ಮಾಡುತ್ತದೆ :ಮನೆಯಲ್ಲಿರುವ ರಿಮೋಟ್ ಕಂಟ್ರೋಲ್‌ನಲ್ಲಿ ಸಿಕ್ಕಾಪಟ್ಟೆ ಕಸ ಮತ್ತು ಕೊಳೆ ತುಂಬಿರುತ್ತವೆ. ಬಹುತೇಕ ಜನರು ತಮ್ಮ ಮನೆ ಸ್ವಚ್ಛ ಮಾಡುವಾಗ ರಿಮೋಟ್ ಕಂಟ್ರೋಲ್‌ನ ಸ್ವಚ್ಛತೆಯನ್ನು ಕಡೆಗಣಿಸುವುದೇ ಹೆಚ್ಚು. ಇದರ ಬಟನ್‌ಗಳ ಸುತ್ತ ತುಂಬಿರುವ ಕೊಳೆಯನ್ನು ತೆಗೆಯಲು ಕಷ್ಟ ಎಂಬ ಕಾರಣಕ್ಕೂ ಇದರ ಸ್ವಚ್ಛತೆಗೆ ಯಾರೂ ಮುಂದಾಗುವುದಿಲ್ಲ. ಈ ನಿಟ್ಟಿನಲ್ಲಿ ನಿಮಗೆ ಟೂತ್‌ಪಿಕ್ ನೆರವಾಗಬಲ್ಲದು. ಇದರ ಸಹಾಯದಿಂದ ನೀವು ಬಟನ್‌ಗಳ ನಡುವಿರುವ ಕೊಳೆಯನ್ನು ಸುಲಭವಾಗಿ ತೆಗೆಯಬಹುದು.

ಸಡಿಲ ಕುರ್ಚಿಗಳ ಜೋಡಣೆ :ಮನೆಯಲ್ಲಿ ಕೊಂಚ ಅಲುಗಾಡುವ ಕುರ್ಚಿಗಳಿದ್ದರೆ ಅದರಲ್ಲಿ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಹೊಸ ಕುರ್ಚಿಯನ್ನು ತರಬೇಕಾಗಿಲ್ಲ. ಕುರ್ಚಿಯ ಸೀಟ್‌ಗೆ ಹೊಂದಿಕೊಂಡಿರುವ ಸಡಿಲವಾಗಿರುವ ಕಾಲಿಗೆ ಟೂತ್‌ಪಿಕ್ ಚುಚ್ಚಿಟ್ಟರೆ ಸರಿಯಾಗುತ್ತದೆ.

ಸಣ್ಣ ವಸ್ತುಗಳನ್ನು ಅಂಟಿಸುತ್ತದೆ : ಮನೆಯಲ್ಲಿಯೇ ಕರಕುಶಲ ವಸ್ತುಗಳ ತಯಾರಿಸುವ ಕಲಾವಿದರಿಗೂ ಟೂತ್‌ಪಿಕ್ ತುಂಬಾ ಸಹಾಯವಾಗುವ ವಸ್ತು. ಫ್ಲವರ್ ಪಾಟ್‌ಗಳಿಗೆ ಮಣಿಗಳನ್ನು ಅಂಟಿಸಲು, ಕಾರ್ನರ್‌ಗಳಿಗೆ ಕನ್ನಡಿಗಳನ್ನು ಅಳವಡಿಸುವಾಗ ಅಥವಾ ಬೋರ್ಡ್‌ನಲ್ಲಿ ಕೊಲಾಜ್ ಮಾಡುವಾಗ ಟೂತ್‌ಪಿಕ್‌ಗಳನ್ನು ಕೈಯಲ್ಲಿಟ್ಟುಕೊಂಡರೆ ಉತ್ತಮ. ಇದರ ಮೂಲಕ ನೀವು ನಿಮ್ಮ ಕೈಗಳು ಕೊಳೆಯಾಗದಂತೆ ಅಂಟನ್ನು ಅಂಟಿಸಬಹುದು.

ಒಟ್ಟಿನಲ್ಲಿ ಮುಂದಿನ ಬಾರಿ ಗೃಹ ಬಳಕೆ ಉತ್ಪನ್ನಗಳನ್ನು ಖರೀದಿಸುವಾಗ ಟೂತ್‌ಪಿಕ್ ಬಾಕ್ಸ್ ಖರೀದಿಸಲು ಮರೆಯಬೇಡಿ.

Comments are closed.