ಕರಾವಳಿ

ಹಿರಿಯಡಕ ಜೈಲಿನಲ್ಲಿ ನೇಣು ಬಿಗಿದುಕೊಂಡು ವಿಚಾರಣಾಧೀನ ಕೈದಿ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಹಿರಿಯಡಕದ ಉಡುಪಿ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿ, ಉಡುಪಿ ಕಿದಿಯೂರಿನ ನಿವಾಸಿ ಅಮರ್‌ ಯಾನೆ ಅಮರನಾಥ (32) ಅವರು ರವಿವಾರ ಜೈಲಿನ ವೀಡಿಯೋ ಕಾನ್ಫರೆನ್ಸ್‌ ರೂಮಿನ ಸೋಲಾರ್‌ ಬ್ಯಾಟರಿ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದಿದ್ದು, ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಜೈಲಿನ ಅಧೀಕ್ಷಕ ಸಂಜಯ್‌ ಜತ್ತಿ ಮತ್ತು ಸಿಬಂದಿ ಆತನನ್ನು ನೇಣಿನಿಂದ ಕೆಳಗಿಳಿಸಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. ಫೆ. 3ರಂದು ಬೆಳಗ್ಗೆ 8 ಗಂಟೆಗೆ ಪ್ರಾತಃಕ್ರಿಯೆಗಳನ್ನು ಮುಗಿಸಲು ಬಿಟ್ಟಿದ್ದಾಗ ಘಟನೆ ಸಂಭವಿಸಿದೆ.

ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅಮರ್‌ ವಿರುದ್ಧ ಅತ್ಯಾಚಾರ ಮತ್ತು ಜಾತಿ ನಿಂದನೆ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು 2018 ಅ. 31ರಂದು ಹಿರಿಯಡಕ ಜೈಲಿಗೆ ಕಳುಹಿಸಲಾಗಿತ್ತು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಫೆ. 6ರಂದು ನಡೆಯಲಿತ್ತು. ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಅವರು ಜೈಲು ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.