ಕರಾವಳಿ

ಉಡುಪಿ: 12 ಬ್ಲಾಕ್‌ ಮರಳುಗಾರಿಕೆಗೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯ

Pinterest LinkedIn Tumblr

ಉಡುಪಿ: ಎರಡು ಮತ್ತು ಮೂರನೇ ಹಂತದಲ್ಲಿ ಕರೆಯಲಾದ ತಲಾ 6 ಮರಳು ಬ್ಲಾಕ್‌ಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಗುತ್ತಿಗೆದಾರರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿಗಳು ತಿಳಿಸಿದ್ದಾರೆ.

ಮರಳು ದಿಬ್ಬ ತೆರವುಗೊಳಿಸಲು ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಕಾರ್ಯದರ್ಶಿಯಿಂದ ಅನುಮೋದನೆ ಪಡೆದ 7 ಮರಳು ದಿಬ್ಬಗಳಲ್ಲಿ 17,526.061 ಮೆ.ಟನ್‌ ಮರಳು ತೆಗೆಯಲು ಅವಕಾಶವಿದೆ. ಸೀತಾ ನದಿ ಪಾತ್ರದ‌ಲ್ಲಿ ಗುರುತಿಸಿರುವ 2 ಮರಳು ದಿಬ್ಬಗಳಿಗೆ ಮೀನುಗಾರರಿಂದ ಆಕ್ಷೇಪಣೆ ಬಂದಿದ್ದು, ಇವುಗಳನ್ನು ಬಿಟ್ಟು ಉಳಿದ 5 ಮರಳು ದಿಬ್ಬಗಳಲ್ಲಿ 16,910.524 ಮೆ.ಟನ್‌ ಮರಳು ತೆಗೆಯಲು 45 ಮಂದಿಗೆ ಪರವಾನಿಗೆ ನೀಡಲಾಗಿದೆ.

ಉಳಿದ ನದಿ ಪಾತ್ರಗಳಲ್ಲಿ ಬೆಥಮೆಟ್ರಿಕ್‌ ತಂತ್ರಾಂಶ ಮೂಲಕ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಸರ್ವೇ ನಡೆಸಿರುವ ಸುರತ್ಕಲ್‌ ಎನ್‌ಐಟಿಕೆ 8 ಮರಳು ದಿಬ್ಬಗಳಿಂದ ಒಟ್ಟು 13,86,479.045 ಮೆ.ಟನ್‌ ಮರಳನ್ನು ತೆಗೆಯಬಹುದೆಂದು ವರದಿ ನೀಡಿದೆ. ಜಿಲ್ಲಾ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ ಶಿಫಾರಸಿನೊಂದಿಗೆ ಜ. 8ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ 7 ಸದಸ್ಯರ ಸಮಿತಿ ಸಭೆಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲಾಗುವುದು.

ಜಿಲ್ಲೆಯ ನಾನ್‌ ಸಿಆರ್‌ಝಡ್‌ ಪ್ರದೇಶ ದಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಯಂತೆ ಕನಿಷ್ಠ 5 ಹೆಕ್ಟೇರ್‌ಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿರುವ ಬ್ಲಾಕ್‌ಗಳಿಗೆ ಅನುಮೋದನೆ ಲಭಿಸಿದೆ. ಇಲ್ಲಿ ಪರಿಸರ ನಿರ್ವಹಣಾ ಯೋಜನೆ ಅಗತ್ಯವಿಲ್ಲ. ಪರಿಸರ ಅನುಮತಿ ಪತ್ರ ಪಡೆದ ಅನಂತರ ಮರಳು ಗಣಿಗಾರಿಕೆ ಮಾಡಲು ಸರಕಾರ ಸಮ್ಮತಿಸಿದೆ. 7 ಮರಳು ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.

ನಿಯಮಾವಳಿಯಂತೆ ಟೆಂಡರ್‌/ಹರಾಜು ಮೂಲಕ ಮರಳು ವಿಲೇವಾರಿ ಮಾಡಲು ಟೆಂಡರ್‌ ಕರೆಯಲಾಗಿದೆ. 11 ಬ್ಲಾಕ್‌ಗಳಿಗೆ 96 ಜನ ಟೆಂಡರ್‌ನಲ್ಲಿ ಭಾಗವಹಿಸಿದ್ದು, ಅದರಲ್ಲಿ 57 ಮಂದಿ 3 ವರ್ಷಗಳ ಐಟಿ ರಿಟರ್ನ್ಸ್ ಪ್ರತಿ ಸಲ್ಲಿಸಿಲ್ಲ. ಷರತ್ತುಗಳನ್ನು ಸಡಿಲಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.

Comments are closed.