ಕರಾವಳಿ

41 ದಿನ ಕಳೆದರೂ ಸುವರ್ಣ ತ್ರಿಭುಜ ಬೋಟ್ ಸುಳಿವಿಲ್ಲ: ಅವಶೇಷ ಪತ್ತೆ ಬಗ್ಗೆ ನೌಕಾಪಡೆ ದೃಢ

Pinterest LinkedIn Tumblr

ಉಡುಪಿ: ಸಮುದ್ರದ ಆಳದಲ್ಲಿ 22 ಮೀ. ಉದ್ದದ ವಸ್ತುವಿನ ಅವಶೇಷ ಒಂದು ಪತ್ತೆಯಾಗಿರುವುದು ಹೌದು ಎಂದು ಶೋಧಕಾರ್ಯ ನಡೆಸುತ್ತಿರುವ ನೌಕಾಪಡೆಯ ಹಡಗಿನ ಸಿಬಂದಿ ದೃಢಪಡಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅದು ಸುವರ್ಣ ತ್ರಿಭುಜ ದೋಣಿಯಧ್ದೋ ಇನ್ನಾವುದರಧ್ದೋ ಗೊತ್ತಾಗಿಲ್ಲ. ಈ ಬಗ್ಗೆ 3ಡಿ ಮ್ಯಾಪಿಂಗ್‌ ಕಾರ್ಯ ನಡೆಯುತ್ತಿದೆ.

ಈಗ ದೊರೆತಿರುವ ಅವಶೇಷ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಮಹಾರಾಷ್ಟ್ರದ ಸಿಂಧುದುರ್ಗಾ ಸಮೀಪದಲ್ಲಿ ಪತ್ತೆಯಾಗಿದೆ. ಅವಶೇಷ 22ಮೀ. ಉದ್ದ ಇರುವುದರಿಂದ ಮೀನುಗಾರಿಕೆ ಬೋಟ್ ಇರಬಹುದು ಎನ್ನಲಾಗುತ್ತಿದೆ.

ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾದ ಆರಂಭದಲ್ಲಿ ಬೋಟ್ ಸಹಿತ ಮೀನುಗಾರರನ್ನು ಅಪಹರಣ ಮಾಡಿರಬಹುದೆಂದು ಶಂಕೆಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಪೊಲೀಸರು, ಕೋಸ್ಟ್‌ಗಾರ್ಡ್‌, ನೌಕಾಪಡೆಗಳು ಜಂಟಿಯಾಗಿ ಮಹಾರಾಷ್ಟ್ರ ತೀರದ ಉದ್ದಕ್ಕೂ ಸುದೀರ್ಘ‌ ಕಾರ್ಯಾಚರಣೆ ಮಾಡಿದ್ದವು. ಯಾವುದೇ ಮಹತ್ವದ ಸುಳಿವು ಸಿಗದ ಹಿನ್ನೆಲೆಯಲ್ಲಿ ಮೀನುಗಾರರು ಅಪಹರಣಕ್ಕೊಳಗಾಗಿರುವ ಸಾಧ್ಯತೆ ಕಡಿಮೆ ಎಂಬ ನಿರ್ಧಾರಕ್ಕೆ ತನಿಖಾಧಿಕಾರಿಗಳು ಬಂದಿದ್ದು, ಆ ಬಳಿಕ ಬೋಟ್ ಮುಳುಗಡೆಯಾಗಿರುವ ಸಾಧ್ಯತೆ ನೆಲೆಯಲ್ಲಿ ಇದೀಗ ಎರಡು ವಾರಗಳಿಂದ ಸಾಗರದ ತಳಭಾಗದಲ್ಲಿ ಶೋಧನೆ ನಡೆಯುತ್ತಿದೆ.

ಗೋವಾದ ಪಣಜಿ ಬೈತುಲ್‌ ಸಮೀಪ ಸಮುದ್ರದಲ್ಲಿ ಡೀಸೆಲ್‌ ಅಂಶ ಪತ್ತೆಯಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ಮಲ್ಪೆಯಿಂದ ತೆರಳಿದ 100ಕ್ಕೂ ಅಧಿಕ ಆಳಸಮುದ್ರ ಟ್ರಾಲ್‌ಬೋಟ್‌ಗಳಿಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ನೀರಿನ ತಳಭಾಗಕ್ಕೆ ಲಂಗರು (ಆ್ಯಂಕರ್‌) ಇಳಿಸಿದರೂ ಸುಳಿವು ಲಭಿಸಿಲ್ಲ.

Comments are closed.