ಕರಾವಳಿ

ಉಡುಪಿಯಲ್ಲಿ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ!

Pinterest LinkedIn Tumblr

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ಸುಸ್ಧಿರ ಬಳಕೆ, ಶೌಚಾಲಯದ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಉತ್ತಮ ಗುಣಮಟ್ಟದ ಶೌಚಾಲಯ ನಿರ್ಮಾಣದ ಖಾತರಿಪಡಿಸುವಿಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗೃಹ ಶೌಚಾಲಯಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ದಿನಾಂಕ 1-1-2019 ರಿಂದ 31-01-2019 ರವರೆಗೆ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆಯನ್ನು ಆಯೋಜಿಸಿದೆ.

ಒಂದು ತಿಂಗಳ ಕಾಲ ನಡೆಯುವ ಈ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆಯ ಆಂದೋಲನ ಅವಧಿಯಲ್ಲಿ ಅತೀ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಶೇಕಡಾವಾರು ಸಾಧನೆಯ ಆಧಾರದ ಮೇಲೆ ಜಿಲ್ಲೆ, ಗ್ರಾಮ ಪಂಚಾಯತ್‌ಗಳು ಹಾಗೂ ಕ್ರಿಯಾತ್ಮಕವಾಗಿ ಮತ್ತು ವರ್ಣರಂಜಿತವಾಗಿ ಬಣ್ಣ ಬಳಿದ ವೈಯಕ್ತಿಕ ಕುಟುಂಬಗಳಿಗೂ ಸಹ ಕೇಂದ್ರ ಸರಕಾರ ಪುರಸ್ಕಾರವನ್ನು ನೀಡಿ ಗೌರವಿಸಲಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಿಂಧು ಬಿ. ರೂಪೇಶ್ ತಿಳಿಸಿರುತ್ತಾರೆ.

ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಮಾಲೀಕರು ತಮ್ಮ ಶೌಚಾಲಯಗಳಿಗೆ ಬಣ್ಣ ಬಳಿಸುವುದು, ಶೌಚಾಲಯದ ಗೋಡೆಯ ಮೇಲೆ ಚಿತ್ರ ಕಲೆ ಬಿಡಿಸುವುದು, ಸ್ವಚ್ಛ ಭಾರತ್ ಮಿಷನ್(ಗ್ರಾ) ಚಿಹ್ನೆ ಬಿಡಿಸುವುದು, ಶೌಚಾಲಯ ಬಳಕೆಯ ಕುರಿತು ಸಂದೇಶ, ಸ್ವಚ್ಛ ಭಾರತ್ ಮಿಷನ್ ಘೋಷ ವಾಕ್ಯಗಳ ಬರಹಗಳನ್ನು ಶೌಚಾಲಯದ ಮೇಲೆ ಬರೆಸಲು ಹಾಗೂ ಸ್ವಚ್ಛತೆ ಸಂಬಂಧಿಸಿದ ಈ ಆಂದೋಲನ ಯಶಸ್ವಿಯಾಗಲು ಜಿಲ್ಲೆಯ ಜನರು ಸಹಕರಿಸುವಂತೆ ಉಡುಪಿ ಜಿಲ್ಲಾ ಪಂಚಾಯತ್ ಪ್ರಕಟನೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಗ್ರಾಮ ಪಂಚಾಯತನ್ನು ಸಂಪರ್ಕಿಸಲು ತಿಳಿಸಲಾಗಿದೆ.

Comments are closed.