ಕರಾವಳಿ

ಮೀಸಲು ಅರಣ್ಯದಲ್ಲಿ ಬಲಿಷ್ಟ ಕಾಡುಕೋಣ ಹತ್ಯೆ: ಆರೋಪಿಗಳು ದೋಷಮುಕ್ತ

Pinterest LinkedIn Tumblr

ಕುಂದಾಪುರ : ಮೂಕಾಂಬಿಕಾ ಅಭಯಾರಣ್ಯದ ಮಾದಿಬರೇ ಮೀಸಲು ಅರಣ್ಯದಲ್ಲಿ ಆಕ್ರಮ ಬಂದೂಕಿನಿಂದ ಬಲಿಷ್ಠವಾದ ಕಾಡುಕೋಣ ಹತ್ಯೆ ಮಾಡಿದ್ದ ಆರೋಪಗಳನ್ನು ಎದುರಿಸುತ್ತಿದ್ದ ಮುದೂರಿನ ಕೊಟ್ಟತ್ತಲ್‌ ಬೇಬಿ, ಶಿಬು, ಜೋಬೀ, ಜಡ್ಕಲ್‌ನ ಅನಿಲ್‌ ಹಾಗೂ ಲಕ್ಷಣ ಎನ್ನುವ ಐವರು ಆರೋಪಿಗಳನ್ನು ದೋಷ ಮುಕ್ತಿಗೊಳಿಸಿ ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅಂದಿನ ಕೊಲ್ಲೂರಿನ ಠಾಣಾಧಿಕಾರಿ ಸಂಪತ್‌ ಅವರು ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆ ಹಾಗೂ ಭಾರತೀಯ ಶಸ್ತ್ರಾಸ್ರ ಕಾಯಿದೆಯಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಬಂದೂಕು ತಜ್ಞ ಎನ್‌.ಜೆ.ಪ್ರಭಾಕರ ಅವರು ನ್ಯಾಯಾಲಯಲ್ಲಿ ಸಾಕ್ಷಿ ನುಡಿದ ವೇಳೆ ವಶಪಡಿಸಿಕೊಳ್ಳಲಾದ ಆಯುಧ ಬಂದೂಕು ಎಂದು ದೃಡೀಕರಿಸಿದ್ದರು. ಪಶು ವೈದ್ಯ ಡಾ.ಅರುಣ್‌ಕುಮಾರ ಶೆಟ್ಟಿ ಹಾಗೂ ವಿಧಿ ವಿಜ್ಞಾನ ತಜ್ಞೆ ಡಾ.ಗೀತಾಲಕ್ಷ್ಮೀ ಅವರು ಮೃತ ಪ್ರಾಣಿ ಕಾಡುಕೋಣದ್ದು ಎಂದು ಸಾಕ್ಷ್ಯ ಹೇಳಿದ್ದರು. ವಿಚಾರಣೆಯ ವೇಳೆ 12 ಮಂದಿ ಸಾಕ್ಷಿ ನುಡಿದಿದ್ದರು.

ವಿಚಾರಣೆ ನಡೆಸಿದ್ದ ಕುಂದಾಪುರದ 2ನೇ ಜೆಎಂಎಫ್‌ಸಿ ಹೆಚ್ಚುವರಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಅವರು ಆರೋಪಿಗಳ ವಿರುದ್ದ ಮಾಡಲಾಗಿರುವ ಆರೋಪಗಳು ರುಜುವಾತಾಗಿಲ್ಲ ಎಂದು ತೀರ್ಮಾನಿಸಿ ಎಲ್ಲ ಐವರು ಆರೋಪಿಗಳನ್ನು ದೋಷಮುಕ್ತಿಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ ವಾದಿಸಿದ್ದರು.

Comments are closed.