ಕರಾವಳಿ

ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ಅವರ ಅಭಿನಂದನೆ ಕಾರ್ಯಕ್ರಮಕ್ಕೆ ನಗರದಲ್ಲಿ ಭರದ ಸಿದ್ಧತೆ

Pinterest LinkedIn Tumblr

ಮಂಗಳೂರು, ಜನವರಿ. 09: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕಳೆದ 25 ವರ್ಷಗಳಲ್ಲಿ ಮಹತ್ವದ ಕೊಡಗೆ ನೀಡುತ್ತಾ ಬಂದಿರುವ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ಅವರ ಅಭಿನಂದನೆ ಕಾರ್ಯಕ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ಸಮಾವೇಶ ಇದೇ ಬರುವ 19ರಂದು ನಗರದ ಕೇಂದ್ರ ಮೈದಾನದಲ್ಲಿ ಜರಗಲಿದ್ದು, ಭರ್ಜರಿ ಸಿದ್ದತೆಗಳು ನಡೆಯುತಿದೆ.

ಇತ್ತೀಚಿಗೆ ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ ನಲ್ಲಿ ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅವಧಿಯ ‘ರಜತ ಸಂಭ್ರಮ’ ಹಾಗೂ ನವೋದಯ ಸ್ವ ಸಹಾಯ ಸಂಘಗಳ ವಿಂಶತಿ ಸಮಾರಂಭದ “ಚಪ್ಪರ ಮುಹೂರ್ತ” ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜ, ಮೇಯರ್ ಭಾಸ್ಕರ್ ಮೊಯಿಲಿ ಹಾಗೂ ಮತ್ತಿತ್ತರ ಗಣ್ಯರು ಪಾಲ್ಗೊಂಡಿದ್ದರು.

ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ರವಿರಾಜ ಹೆಗ್ಡೆ, ಭಾಸ್ಕರ ಎಸ್.ಕೋಟ್ಯಾನ್, ಸದಾಶಿವ ಉಳ್ಳಾಲ್, ಸವಣೂರು ಸೀತಾರಾಮ ರೈ, ಎಸ್.ಬಿ. ಜಯರಾಮ ರೈ, ರವಿರಾಜ ಹೆಗ್ಡೆ, ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸರಳಾ ಕಾಂಚನ್, ನಿರಂಜನ ಭಾವಂತಬೆಟ್ಟು,ಎಸ್ ಸಿ ಡಿಸಿಸಿ ಬ್ಯಾಂಕ್‌ನ ಸಿಇಒ ರವೀಂದ್ರನಾಥ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಕುಮಾರ ಸ್ವಾಮಿ ಉದ್ಘಾಟನೆ : 2 ಲಕ್ಷ ಜನರ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷರ ಸೇವಾವಧಿಯ ರಜತ ಮಹೋತ್ಸವದ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶ ಜ.19ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸಚಿವರು, ಸಂಸದರು, ಮಾಜಿ ಸಚಿವರು ಭಾಗವಹಿಸಲಿದ್ದಾರೆ. ಜ.18ರಂದು 9 ಸಾವಿರ ಮಂದಿ ಉತ್ತರ ಕನ್ನಡ ಹಾಗೂ ಶಿವಮೊಗ್ಗದಿಂದ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 2 ಲಕ್ಷ ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೆರವಣಿಗೆ, ವಿಂಶತಿ ಸ್ಮರಣ ಸಂಚಿಕೆ ಮತ್ತು ಆಕರ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಹಕಾರಿ ವಸ್ತು ಸಂಗ್ರಹಾಲಯ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಯಲಿದೆ.

Comments are closed.