ಕರಾವಳಿ

ದಾಂಪತ್ಯ ಜೀವನ ಹೇಗಿರಬೇಕೆಂಬುದರ ಸೂಚಿಸಲು ಸಾಂಕೇತಿಕ ಚಿಹ್ನೆ “ವಧು ಬೊಂಡ”

Pinterest LinkedIn Tumblr

ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ಮದುವೆಗಳಲ್ಲಿ,ಮದುಮಗಳ ಕೈಯಲ್ಲಿ ತೆಂಗಿನಕಾಯಿ ( ಎಳನೀರು) ಇರುವುದನ್ನಿ ನೀವು ಗಮನಿಸಿರುತ್ತೀರ. ಮದುವೆಗೂ ಈ ‘ಬೊಂಡ’ಕ್ಕೂ ಇರುವ ನಂಟಾದರೂ ಏನೆಂದು ನಿಮಗನಿಸುತ್ತದೆ. ಮಣೆ ಏರಬೇಕಾದ ವಧು ಬೊಂಡ ವನ್ನು ಕೈ ಯಲ್ಲಿ ಹಿಡಿದುಕೊಂಡು ಬರುವ ಅಗತ್ಯವಾದರೂ ಏನು? ಬೊಂಡ ಮಾತ್ರ ಏಕೆ? ಬೇರೆ ಯಾವುದಾದರೂ ವಸ್ತುಗಳನ್ನು ತರಬಹುದೇ? ಎಂಬ ಪ್ರಶ್ನೆಗಳಿಗೆ ಇಗೋ… ಇಲ್ಲಿದೆ ನೋಡಿ ಉತ್ತರ.

‘ತೆಂಗಿನಕಾಯಿ’ ಯನ್ನು ಪೂರ್ಣಫಲವೆನ್ನುತ್ತಾರೆ. ಇದು ದಾಂಪತ್ಯ ಜೀವನ ಹೇಗಿರಬೇಕೆಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಗಂಡ ಹೆಂಡಿರ ದಾಂಪತ್ಯ ಸಾಗುತ್ತಿರುವಾಗ ಅವರಿಬ್ಬರ ನಡುವೆ ಪ್ರೀತಿ,ಪ್ರೇಮ ,ಅನುರಾಗ,ಆಪ್ಯಾಯತೆಗಳು ವೃದ್ಧಿಸಬೇಕೆಂಬುದನ್ನು ಸೂಚಿಸುತ್ತದೆ. ಹೊರಗೆ ನೋಡಲು ಗಟ್ಟಿಯಾಗಿದ್ದರೂ,ಒಳಗೆ ಅಮೃತ ಸಮಾನವಾದ ನೀರಿರುತ್ತದೆ. ಜೀವನವೂ ಸಹ ಇದೇ ರೀತಿಯಾಗಿದೆ. ದಂಪತಿಗಳಿಗೆ ಎಷ್ಟೇ ಕಷ್ಟಗಳು ಬಂದರೂ,ಅವರು ಅನ್ಯೋನ್ಯತೆಯಿಂದ ಇದ್ದರೆ ಬೊಂಡದಲ್ಲಿರುವ ನೀರಿನ ಹಾಗೆ ಜೀವನದಲ್ಲಿ ಸಿಹಿಯನ್ನು ಅನುಭವಿಸಬಹುದು.

ಸಂಪ್ರದಾಯದ ಪ್ರಕಾರ…ಕನ್ಯಾದಾನ ಮಾಡುವಾಗ…ಅಲಂಕರಿಸಿಕೊಂಡಿರುವ ಕನ್ಯೆಯನ್ನೇ ದಾನ ಮಾಡಬೇಕು. ಕಿವಿಗಳಲ್ಲಿ ಓಲೆ,ಮೂಗಿಗೆ ಮೂಗುಬಟ್ಟು, ಕೊರಳಲ್ಲಿ ಸರ,ಕೈಯಲ್ಲಿ ಬಳೆ,ಸೊಂಟಕ್ಕೆ ವಡ್ಯಾಣ(ಡಾಬು)- ಇವೆಲ್ಲವೂ ಬಂಗಾರದ್ದಾಗಿರಬೇಕು. ಬಹಳಷ್ಟು ಜನರಿಗೆ ಇವೆಲ್ಲವನ್ನೂ ಕೊಡುವ ಆರ್ಥಿಕ ಶಕ್ತಿಯಿರುವುದಿಲ್ಲ ಆದುದರಿಂದ, ಈ ಬಂಗಾರದ ಆಭರಣಗಳಿಗೆ ಬದಲಾಗಿ, ಬೊಂಡ,ಗಂಧದ ಚಕ್ಕೆ,ಕುಂಬಳಕಾಯಿ ಮೊದಲಾದುವುಗಳನ್ನು ಕನ್ಯಾದಾನ ಮಾಡುವ ಸಮಯದಲ್ಲಿ ಕೊಡುತ್ತಾರೆ. ಇವೆಲ್ಲವೂ ಬಂಗಾರಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳ ವಸ್ತುಗಳೆಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಮತ್ತೊಂದು ವಿಷಯ… ಬಹಳಷ್ಟು ಮಂದಿ ಮದುವೆಗಳಲ್ಲಿ, ಬೊಂಡದ ಮೇಲೆ ಮದುಮಗ-ಮದುಮಗಳ ಹೆಸರುಗಳನ್ನು, ಮದುವೆಯ ಉಡುಗೊರೆ ಮೊದಲಾದ ಬರಹಗಳನ್ನು ಬರೆದಿರುತ್ತಾರೆ. ಸಂಪ್ರದಾಯದ ಪ್ರಕಾರ ಹೀಗೆ ಬರೆಯುವುದು ನಿಷಿದ್ಧ. ಯಾಕೆಂದರೆ…’ತೆಂಗಿನಕಾಯಿ’ ಪಾರ್ವತೀ ಪರಮೇಶ್ವರ ರ ಸ್ವರೂಪ. ಅಂತಹ ಪವಿತ್ರವಾದ ವಸ್ತುವಿನ ಮೇಲೆ ಹುಚ್ಚು ಬರಹಗಳು ಇಲ್ಲದಿದ್ದರೇನೇ ಉತ್ತಮ.

Comments are closed.