ಕರಾವಳಿ

ಎಸ್‌ಸಿಡಿಸಿಸಿ ಅಧ್ಯಕ್ಷರಾಗಿ 25 ವರ್ಷಗಳಲ್ಲಿ ಮಹತ್ವದ ಕೊಡಗೆ ನೀಡುವ ಮೂಲಕ ಇತಿಹಾಸ ನಿರ್ಮಿಸಿದ ಡಾ. ಎಂ.ಎನ್.ಆರ್ : ಸಚಿವ ಖಾದರ್

Pinterest LinkedIn Tumblr

ಮಂಗಳೂರು, ಜನವರಿ.01: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕಳೆದ 25 ವರ್ಷಗಳಲ್ಲಿ ಮಹತ್ವದ ಕೊಡಗೆ ನೀಡುತ್ತಾ ಬಂದಿರುವ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ಅವರ ಅಭಿನಂದನೆ ಕಾರ್ಯಕ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಸಹಕಾರಿ ಸಂಘಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದರೆ ಅವರು ಅಭಿನಂದನೆಗೆ ಅರ್ಹ ವ್ಯಕ್ತಿ, ಜೊತೆಗೆ ನಡೆಯುವ ಸಹಕಾರಿ ಸಮಾವೇಶ ಸಹಕಾರಿ ರಂಗಕ್ಕೆ ಇನ್ನಷ್ಟು ಪ್ರೇರಣೆ ನೀಡುವ ಕಾರ್ಯಕ್ರಮವಾಗಲಿ. ಜಿಲ್ಲೆಯ ಸಹಕಾರಿ ರಂಗವನ್ನು ಬಲಗೊಳ್ಳುವಂತೆ ಮಾಡುವಲ್ಲಿ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಕಳೆದ 25 ವರ್ಷಗಳಲ್ಲಿ ಅಧ್ಯಕ್ಷರಾಗಿ ಮಹತ್ವದ ಕೊಡಗೆ ನೀಡಿದ್ದಾರೆ. ಇತಿಹಾಸ ನಿರ್ಮಿಸಿದ್ದಾರೆ. ಈ ರೀತಿಯ ದೀರ್ಘವಾದ ಸೇವೆ ನೀಡಿದ ಉದಾಹರಣೆ ವಿರಳ, ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.

ವಿಶೇಷ ಅಥಿತಿಗಳಾಗಿ ಪಾಲ್ಗೊಂಡಿದ್ದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸಹಕಾರಿ ರಂಗದಲ್ಲಿ ಗ್ರಾಹಕರಿಗೆ ಭದ್ರತೆ, ಆರ್ಥಿಕ ನೆರವು, ಲಾಭಾಂಶ ದೊರಕಿಸಿಕೊಡುವಲ್ಲಿ ರಾಜೇಂದ್ರ ಕುಮಾರ್‌ ಸಾಧನೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿ ಕುಮಾರ ಸ್ವಾಮಿ ಉದ್ಘಾಟನೆ : 2 ಲಕ್ಷ ಜನರ ನಿರೀಕ್ಷೆ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷರ ಸೇವಾವಧಿಯ ರಜತ ಮಹೋತ್ಸವದ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಹಾಗೂ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶ ಜ.19ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಸಚಿವರು, ಸಂಸದರು, ಮಾಜಿ ಸಚಿವರು ಭಾಗವಹಿಸಲಿದ್ದಾರೆ. ಜ.18ರಂದು 9 ಸಾವಿರ ಮಂದಿ ಉತ್ತರ ಕನ್ನಡ ಹಾಗೂ ಶಿವಮೊಗ್ಗದಿಂದ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 2 ಲಕ್ಷ ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.

ಸಮಾರಂಭದಲ್ಲಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ರವಿರಾಜ ಹೆಗ್ಡೆ, ಭಾಸ್ಕರ ಎಸ್.ಕೋಟ್ಯಾನ್, ಸದಾಶಿವ ಉಳ್ಳಾಲ್, ಸವಣೂರು ಸೀತಾರಾಮ ರೈ, ಎಸ್.ಬಿ. ಜಯರಾಮ ರೈ, ರವಿರಾಜ ಹೆಗ್ಡೆ, ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸರಳಾ ಕಾಂಚನ್, ನಿರಂಜನ ಭಾವಂತಬೆಟ್ಟು,ಎಸ್ ಸಿ ಡಿಸಿಸಿ ಬ್ಯಾಂಕ್‌ನ ಸಿಇಒ ರವೀಂದ್ರನಾಥ್ ಮೊದಲಾದವರು ಉಪಸ್ಥಿತರಿದ್ದರು.

Comments are closed.