ಕರಾವಳಿ

ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆ ಪ್ರಾಯೋಜಕ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಸನ್ಮಾನ

Pinterest LinkedIn Tumblr

ಹಸಿದವರಿಗೆ ಅನ್ನ ಮಾದರಿ ಕಾರ್ಯಕ್ರಮ : ರೈ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳ ಜೊತೆ ಇರುವವರಿಗೆ ಒಂದು ವರ್ಷದಿಂದ ಪ್ರತಿದಿನ ಶಿಸ್ತುಬದ್ಧವಾಗಿ ಅನ್ನ ನೀಡುತ್ತಿರುವ ಎಂಫ್ರೆಂಡ್ಸ್ ಟ್ರಸ್ಟ್‌ನ ಕಾರ್ಯಕ್ರಮ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಮಾದರಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ನಗರದ ವೆನ್ಲಾಕ್ ಆಸ್ಪತ್ರೆಯ ರೋಟರಿ ಫಿಸಿಯೋಥೆರಪಿ ವಿಭಾಗದ ಆವರಣದಲ್ಲಿ ಶುಕ್ರವಾರ ಎಂಫ್ರೆಂಡ್ಸ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆ ರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಜಕತ್ವ ನೀಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರಿಗೆ ಇದು ಆದರ್ಶ : ಶಾಸಕ ಕಾಮತ್

ಶಾಸಕ ವೇದವ್ಯಾಸ ಡಿ.ಕಾಮತ್ ಮಾತನಾಡಿ, ಮನುಷ್ಯನಿಗೆ ಏನು ಕೊಟ್ಟರೂ ತೃಪ್ತಿ ಇರುವುದಿಲ್ಲ. ಅನ್ನ ಕೊಟ್ಟರೆ ಮಾತ್ರ ಸಂತೃಪ್ತನಾಗುತ್ತಾನೆ. ಇದು ಸಮಾಜದಲ್ಲಿ ಸೌಹಾರ್ದ ಮೂಡಿಸುವ ಭಾವನಾತ್ಮಕ ಕಾರ್ಯಕ್ರಮ. ಯುವಕರಿಗೆ ಇದು ಆದರ್ಶ. ಯೋಜನೆಗೆ ನನ್ನ ಸಹಾಯವನ್ನೂ ನೀಡುವೆ ಎಂದರು.

ಎಂಫ್ರೆಂಡ್ಸ್ ಕಾರ್ಯಕ್ರಮ ಶ್ಲಾಘನೀಯ : ಡಾ.ರಾಜೇಶ್ವರಿ ದೇವಿ

ಪ್ರಸಾದಕ್ಕೆ ವಿಷ ಹಾಕಿ ನೀಡುವಂಥ ಸಂದರ್ಭದಲ್ಲಿ ಹಸಿದವರಿಗೆ ಯಾವುದೇ ಪ್ರತಿಫಲ ಅಪೇಕ್ಷಿಸದೆ, ಪ್ರತಿದಿನ ನಿಗದಿತ ಸಮಯಕ್ಕೆ ಶುಚಿ, ರುಚಿಯಾದ ಆಹಾರ ನೀಡುವ ಎಂಫ್ರೆಂಡ್ಸ್ ಕಾರ್ಯಕ್ರಮದಿಂದ ನಮಗೆ ಬಹಳ ಅನುಕೂಲವಾಗಿದೆ. ಇದೊಂದು ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಎಚ್.ಆರ್ ಬಣ್ಣಿಸಿದರು.

ಸನ್ಮಾನ: ಒಂದು ತಿಂಗಳ ಪ್ರಾಯೋಜಕತ್ವ ನೀಡಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಯೋಜನೆಯ ಪ್ರಮುಖ ದಾನಿಗಳಾದ ಮನ್ಸೂರ್ ಅಹ್ಮದ್ ಆಝಾದ್ ಅವರನ್ನು ಮತ್ತು ಯೂನುಸ್ ಹಸನ್ ಮಣಿಪಾಲ ಅವರ ತಾಯಿ ಹಾಜಿರಾ ಅವರನ್ನು ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿದ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಎಂಫ್ರೆಂಡ್ಸ್‌ನ ಹಸಿವು ನೀಗಿಸುವ ಪುಣ್ಯದಾಯಕ ಯೋಜನೆ ಜತೆಗೂ ಕೈಜೋಡಿದ್ದು, ಮುಂದೆಯೂ ನೆರವು ನೀಡುತ್ತೇವೆ ಎಂದರು.

ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ರಾಜೇಶ್ವರಿದೇವಿ ಎಚ್.ಆರ್., ಮೇಯರ್ ಭಾಸ್ಕರ್ ಕೆ. ಶುಭ ಹಾರೈಸಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅಝೀಝ್ ಬಸ್ತಿಕಾರ್ ಮತ್ತು ಫಲಾನುಭವಿಗಳಲ್ಲಿ ಒಬ್ಬರಾದ ಚಿತ್ರದುರ್ಗದ ಓಂಕಾರ್ ಎಂ.ಕೊಟ್ರೆ ಅನಿಸಿಕೆ ವ್ಯಕ್ತಪಡಿಸಿದರು.

ಎಂಫ್ರೆಂಡ್ಸ್ ಟ್ರಸ್ಟ್‌ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಕೋಶಾಧಿಕಾರಿ ಕೊಡಿ ಬಾಲಕೃಷ್ಣ ರೈ, ಎಂಫ್ರೆಂಡ್ಸ್‌ನ ಎನ್‌ಆರ್‌ಐ ಸದಸ್ಯ ಡಾ.ಎ.ಕೆ.ಕಾಸಿಂ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸಿಬ್ಬಂದಿ ರೇಶ್ಮಾ ಶೆಟ್ಟಿ, ಸಿಂಧ್ಯಾ ಶೆಟ್ಟಿ, ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಟ್ರಸ್ಟ್‌ನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಬೂಬಕ್ಕರ್ ವಂದಿಸಿದರು.

 

Comments are closed.