ಕರಾವಳಿ

ಸರಕಾರಗಳು ಕಲಾ ಪೋಷಣೆಯಲ್ಲಿ ವಿಫಲ : ಬಾಲ ಯಕ್ಷಕೂಟ ದಶಮ ಸಂಭ್ರಮಕ್ಕೆ ಚಾಲನೆ ನೀಡಿ ಡಾ. ಮೋಹನ ಆಳ್ವ

Pinterest LinkedIn Tumblr

ಮಂಗಳೂರು: ರಾಜ ಮಹಾರಾಜರು ಕಲೆಗಳನ್ನು ಪೋಷಿಸುತ್ತಿದ್ದರು. ಈಗ ಕೇಂದ್ರ, ರಾಜ್ಯ ಸರಕಾರಗಳು ಪೋಷಿಸುವ ಕೆಲಸ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಕದ್ರಿ ರಾಜಾಂಗಣದಲ್ಲಿ ಬುಧವಾರ ಬಾಲ ಯಕ್ಷಕೂಟವು ದಶ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಆಯೋಜಿಸುವ ಎನ್ ಸಿಸಿ, ಎನ್ ಎಸ್ಸೆಎಸ್, ಪ್ರತಿಭಾ ಕಾರಂಜಿಗಳಲ್ಲಿ, ಯುವಜನೋತ್ಸವಗಳಲ್ಲಿನ ಅವ್ಯವಸ್ಥೆ ಇದನ್ನು ಪ್ರತಿಫಲಿಸುತ್ತಿದೆ. ಎಂದರು.

ವೈವಿಧ್ಯಮಯ ಜಾನಪದ ಕಲೆಗಳ ಭಾರತದಲ್ಲಿ ಈಗ ನೂರ್ಕಾಲ ಕೊಂಡು ಹೋಗುವ ಅಗತ್ಯ ಇದೆ. ಬಾಲ ಯಕ್ಷ ಕೂಟದಂತೆ ಸಾಂಸ್ಕೃತಿ ಕವಾಗಿ ಮೌನ ಜಾಗೃತಿಯ ಮೂಲಕ ಯುವಜನರಲ್ಲಿ ಆಸಕ್ತಿಯನ್ನು ಬಿತ್ತುತ್ತಿವೆ. ಹೀಗೆ ಅನೇಕ ಮಂದಿ ಕಲೆ ಉಳಿಸುವ ಕೆಲ ಮಾಡುತ್ತಿದ್ದಾರೆ. ನಿರಾಶರಾಗುವ ಅಗತ್ಯವಿಲ್ಲ ಎಂದರು. ಯುವಜನರು ಸೌಂದರ್ಯ ಪ್ರಜ್ಞೆ ಇಲ್ಲದೆ ಅಪಾಯಕಾರಿಯಾಗಿ ಬೆಳೆಯಬಾರದು ಎಂದರು.

ಶ್ರೀಕ್ಷೇತ್ರ ಕದ್ರಿಯ ಟ್ರಸ್ಟಿ ಸುರೇಶ್, ಪ್ರದೀಪ್ ಕುಮಾರ್ ಕಲ್ಕೂರ, ಇಡ್ಯ ಶಂಕರನಾರಾಯಣ ಭಟ್, ಬೋಳಾರ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ತಾರಾನಾಥ ಶೆಟ್ಟಿ, ಕದ್ರಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಂಸ್ಥೆಯ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಇದ್ದರು.

ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗಣೇಶ್ ಹೆಬ್ಬಾರ್ ಸ್ವಾಗತಿಸಿದರು. ವಸಂತ ಮರಾಠೆ,ಅರುಣಾ, ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣರಾಜ ನಂದಳಿಕೆ ವಂದಿಸಿದರು.

ಯಕ್ಷಗಾನ ವೈಭವ: 

ಈ ಸಂದರ್ಭ ಯಕ್ಷಗಾನದಲ್ಲಿ ಸ್ಮರಣೀಯ ಸೇವೆ ಗೈದಿರುವ ದಿ. ಕದ್ರಿ ರಾಮಚಂದ್ರ ದೇವಾಡಿಗ ಅವರ ಸಂಸ್ಮರಣೆ ನಡೆಯಿತು.

ಉದ್ಘಾಟನಾ ಸಮಾರಂಭಕ್ಕೆ ಮುನ್ನ ದಿನೇಶ್ ಕೊಡಪದವು ಸಾರಥ್ಯದಲ್ಲಿ ಯಕ್ಷ ಹಾಸ್ಯ ಸಿಂಚನ ಮನ ಸೂರೆಗೊಂಡಿತು. ಜಿತೇಂದ್ರ  ಕುಂದೇಶ್ವರ ನಿರೂಪಿಸಿದರು.

ಬಳಿಕ ಯಕ್ಷಗುರು ರಾಮಚಂದ್ರ ಎಲ್ಲೂರು ನಿರ್ದೇಶನದಲ್ಲಿ ಬಾಲ ಯಕ್ಷಕೂಟದ ಕಲಾವಿದರಿಂದ ಸುದರ್ಶನ ಗರ್ವಭಂಗ ಎಂಬ ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡಿತು.

Comments are closed.