ಕರಾವಳಿ

“ಹೈಹೀಲ್ಡ್ ” ಸ್ವಲ್ಪ ಎಚ್ಚರ ತಪ್ಪಿದರೂ ತೊಂದರೆ ತಪ್ಪಿದಲ್ಲ…!

Pinterest LinkedIn Tumblr

ಹೈ ಹೀಲ್ಡ್ ಚಪ್ಪಲಿ ಹಾಕೋರು ಹುಷಾರಾಗಿರಿ.. ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ಹೆಚ್ಚು ನಡೆಯಬೇಡಿ.. ಹಾಗಂತ ಬಳಸಲೇ ಬೇಡಿ ಎನ್ನುತ್ತಿಲ್ಲ. ಬದಲಿಗೆ ಹೆಚ್ಚು ಅದನ್ನು ಉಪಯೋಗಿಸಬೇಡಿ ಅಂಥ ಹೇಳಬಹುದು. ಇಷ್ಟಕ್ಕೂ ಹೈಹೀಲ್ಡ್ ಚಪ್ಪಲಿಯನ್ನೇಕೆ ಹೆಚ್ಚಾಗಿ ಧರಿಸಿ ಓಡಾಡಬಾರದು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಗುಂಯ್ ಗುಡಬಹುದು. ಕಾರಣವಿಷ್ಟೆ ಹೈಹೀಲ್ಡ್ ಚಪ್ಪಲಿ ಧರಿಸಿ ಹೆಚ್ಚು ಓಡಾಟ ಮಾಡಿದರೆ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ. ಇದು ನಿಜ ಎಂಬುದು ಹಲವರ ಗಮನಕ್ಕೂ ಬಂದಿರಬಹುದು.

ಹಾಗೆ ನೋಡಿದರೆ ಹೈಹೀಲ್ಡ್ ಚಪ್ಪಲಿ ಧರಿಸಿದರೆ ಮಾಮೂಲಿ ಚಪ್ಪಲಿ ಧರಿಸಿ ನಡೆದಾಡಿದಂತೆ ನಡೆದಾಡಲು ಸಾಧ್ಯವಿಲ್ಲ. ನಮ್ಮ ಗಮನ ಚಪ್ಪಲಿ ಮೇಲೆಯೇ ಇರುತ್ತದೆ. ಜತೆಗೆ ಕೆಲವೊಮ್ಮೆ ಕಾಲಿನ ಸಮತೋಲನ ತಪ್ಪಿ ಕಾಲು ಉಳುಕುವ ಸಾಧ್ಯತೆಯೂ ಇರುತ್ತದೆ. ಅದರಲ್ಲೂ ಹೈಹೀಲ್ಡ್ ಧರಿಸಿ ಓಡಾಡಿ ಅಭ್ಯಾಸ ಇಲ್ಲದವರಂತು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ತೊಂದರೆ ತಪ್ಪಿದಲ್ಲ.

ಹೈಹೀಲ್ಡ್ ಧರಿಸಿದವರು ನಡೆಯುವಾಗ ಬೆರಳಿನ ಮೇಲೆ ಹೆಚ್ಚಿನ ಶಕ್ತಿ ಕೊಡಬೇಕಾಗುತ್ತದೆ. ಇದರಿಂದ ಸಮತೋಲನ ತಪ್ಪಲೂ ಬಹುದು. ಹೈಹೀಲ್ಡ್ ಚಪ್ಪಲಿಯಿಂದ ನಡೆಯುವಾಗ ಸಮತೋಲನ ತಪ್ಪಿ ತೊಂದರೆಗಳು ಆಗುವುದು ಕೆಲವೊಮ್ಮೆ ಸಾಮಾನ್ಯ. ಆದರೆ ಬೆನ್ನು ನೋವು ಹೇಗೆ ಬರುತ್ತದೆ ಎಂಬುದು ಕುತೂಹಲಕಾರಿ ಅಂಶವಾಗಿದೆ.

ಇದರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಜ್ಞರು ನೀಡುತ್ತಾರೆ. ಅವರ ಪ್ರಕಾರ ಹೈಹೀಲ್ಡ್ ಚಪ್ಪಲಿಗಳು ದೇಹದ ಸಮತೋಲನವನ್ನು ಪಲ್ಲಟಗೊಳಿಸಿ ಭಾರ ಬೀಳುವ ಅಕ್ಷರೇಖೆಯನ್ನು ಬದಲಿಸುತ್ತದೆ. ಈ ಅಕ್ಷರೇಖೆಯು ತನ್ಮೂಲಕ ದೇಹದ ಭಾರವನ್ನು ಭೂಮಿಗೆ ಸ್ಥಳಾಂತರಿಸುವ ಒಂದು ಕಾಲ್ಪನಿಕ ರೇಖೆಯಂತೆ. ಇದು ಬೆನ್ನು ಹುರಿಯ ಸ್ಯಾಕ್ರಲ್ ಭಾಗದ ಎದುರುಗಡೆ ಹಾದು ಹೋಗುತ್ತದೆಯಂತೆ. ಹೀಗಾಗಿ ಹೈಹೀಲ್ಡ್ ಧರಿಸಿದಾಗ ಆ ರೇಖೆಯು ಅಸ್ತವ್ಯಸ್ತಗೊಂಡು ಹೆಚ್ಚಿನ ಭಾರವು ಬೆನ್ನು ಹುರಿಯ ಲಂಬಾರ್ ಭಾಗದ ಮೇಲೆ ಬಿದ್ದು ಬೆನ್ನು ನೋವು ಕಾಣಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸುವುದು ಸೂಕ್ತವಲ್ಲ. ಹಾಕಿದ್ದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳಬಹುದಾಗಿದೆ. ಆದ್ದರಿಂದ ಒಂದಷ್ಟು ಎಚ್ಚರಿಕೆ ಅಗತ್ಯವಾಗಿದೆ.

ಬೆನ್ನು ನೋವು ವಯಸ್ಸಾದವರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಬಹದು. ಅತಿಯಾದ ತೂಕವೂ ಬೆನ್ನು ನೋವಿಗೆ ಕಾರಣವಾಗಬಹುದು. ವಯಸ್ಸಾದಂತೆ ಮೂಳೆಗಳ ಸವೆತವೂ ಬೆನ್ನು ನೋವು ತರಬಹುದು. ವಯಸ್ಸಾದಂತೆ ಬೆನ್ನು ನೋವುಗಳು ಕಾಣಿಸಿಕೊಳ್ಳುವುದು ಸಹಜ ಆದರೆ ನಾವು ಒಂದಷ್ಟು ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ.

Comments are closed.