ಕರಾವಳಿ

ಮೈಗ್ರೇನ್ ಸಮಸ್ಯೆ ಜೊತೆಗೆ ನಿಮ್ಮನ್ನು ಕಾಡುವ ಇತರ ಕಾಯಿಲೆಗಳು

Pinterest LinkedIn Tumblr

ನೀವು ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ಬಳಲುತ್ತಿದ್ದೀರಾದರೆ ನೀವು ಕೆಲವು ಕಾಯಿಲೆಗಳಿಗೆ ಗುರಿಯಾಗುವ ಅಪಾಯವು ಹೆಚ್ಚಾಗಿರುತ್ತದೆ. ಖಿನ್ನತೆ ಮತ್ತು ಅಸ್ತಮಾದಿಂದ ಹಿಡಿದು ಹೃದ್ರೋಗದವರೆಗೆ ಹಲವಾರು ಕಾಯಿಲೆಗಳೊಂದಿಗೆ ಮೈಗ್ರೇನ್ ತಳುಕು ಹಾಕಿಕೊಂಡಿದೆ. ಮೈಗ್ರೇನ್ ಉಂಟಾಗಲು ಹಲವಾರು ಕಾರಣಗಳಿವೆ ಮತ್ತು ಈ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಇದರಿಂದಾಗಿ ಮೈಗ್ರೇನ್‌ಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಓರ್ವ ವ್ಯಕ್ತಿಗೆ ಯಶಸ್ವಿಯಾದ ಚಿಕಿತ್ಸೆ ಇನ್ನೋರ್ವ ವ್ಯಕ್ತಿಗೆ ಪರಿಣಾಮಕಾರಿಯಾಗದಿರಬಹುದು. ನೀವು ಮೈಗ್ರೇನ್ ಹೊಂದಿದ್ದರೆ ನಿಮ್ಮನ್ನು ಕಾಡುವ ಇತರ ಕಾಯಿಲೆಗಳೂ ಇವೆ. ಈ ಅಪಾಯದಿಂದ ಪಾರಾಗಲು ಮೈಗ್ರೇನ್‌ಗೆ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.

ಖಿನ್ನತೆ
ನಿಮಗೆ ಆಗಾಗ್ಗೆ ಮೈಗ್ರೇನ್ ಕಾಡುತ್ತಿದ್ದರೆ ನೀವು ಖಿನ್ನತೆಗೊಳಗಾಗುವ ಅಪಾಯವು ಮೈಗ್ರೇನ್ ಇಲ್ಲದ ವ್ಯಕ್ತಿಗಿಂತ ಇಮ್ಮಡಿಯಾಗಿರುತ್ತದೆ. ನೀವು ದೀರ್ಘಕಾಲದಿಂದ ವೆುಗ್ರೇನ್ ಅನುಭವಿಸುತ್ತಿದ್ದರೆ ಈ ಅಪಾಯವು ಮುಮ್ಮಡಿಯಾಗಿರುತ್ತದೆ. ಇದು ಮೈಗ್ರೇನ್‌ನೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಕಾಯಿಲೆಗಳ ಲ್ಲೊಂದಾಗಿದೆ.

ಉದ್ವೇಗ
ದೀರ್ಘಕಾಲದಿಂದ ಮೈಗ್ರೇನ್‌ನಿಂದ ಬಳಲುತ್ತಿರುವವರು ಉದ್ವೇಗಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ಇದೇ ರೀತಿ ಹೆಚ್ಚಿನ ಉದ್ವೇಗಕ್ಕೊಳಗಾಗಿರುವವರು ಮೈಗ್ರೇನ್‌ಗೆ ಗುರಿಯಾಗುವ ಸಾಧ್ಯತೆಯು ಹೆಚ್ಚಿರುತ್ತದೆ.

ಪಾರ್ಶ್ವವಾಯು
ಪಾರ್ಶ್ವವಾಯುವಿಗೂ ಮೈಗ್ರೇನ್‌ಗೂ ಸಂಬಂಧವಿದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಬೆಳಕಿನೊಂದಿಗೆ ಮೈಗ್ರೇನ್ ಹೊಂದಿರುವವರು ಇತರರಿಗೆ ಹೋಲಿಸಿದರೆ ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವು ಇಮ್ಮಡಿಯಾಗಿರುತ್ತದೆ.

ಅಪಸ್ಮಾರ
ಅಪಸ್ಮಾರ ಮತ್ತು ಮೈಗ್ರೇನ್ ಸಂವೇದನಾ ವ್ಯತ್ಯಯಗಳನ್ನು ಮತ್ತು ಮನೋಸ್ಥಿತಿಯಲ್ಲಿ ಬದಲಾವಣೆಗಳನ್ನುಂಟು ಮಾಡುತ್ತವೆ. ಇವುಗಳಲ್ಲಿ ಯಾವುದಾದರೂ ಒಂದನ್ನು ಹೊಂದಿದ್ದರೆ ಇನ್ನೊಂದಕ್ಕೆ ಗುರಿಯಾಗುವ ಅಪಾಯ ಇಮ್ಮಡಿಯಾಗಿರುತ್ತದೆ,ಆದರೆ ಇವುಗಳ ಪೈಕಿ ಯಾವುದಾದರೂ ಒಂದು ವ್ಯಕ್ತಿಯನ್ನು ಕಾಡಬಹುದು.

ಹೃದ್ರೋಗ
ಮೈಗ್ರೇನ್ ಹೊಂದಿರುವ ಪುರುಷರು ಮತ್ತು ಮಹಿಳೆಯರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಮೈಗ್ರೇನ್‌ನಿಂದ ಬಳಲುತ್ತಿರುವವರು ಹೃದಯಾಘಾತ,ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು ಎನ್ನುವುದು ಸಂಶೋಧನೆ ಗಳಿಂದ ಬೆಳಕಿಗೆ ಬಂದಿದೆ.

ಅಸ್ತಮಾ
ಉರಿಯೂತವು ಅಸ್ತಮಾ ಮತ್ತು ಮೈಗ್ರೇನ್‌ಗಳಲ್ಲಿಯ ಸಮಾನ ಅಂಶವಾಗಿದೆ. ಮಿದುಳಿನ ಹೊರಗಿರುವ ರಕ್ತನಾಳಗಳ ಉರಿಯೂತವು ಪುಟಿದೇಳುವ ನೋವಿಗೆ ಕಾರಣವಾಗುತ್ತದೆ ಮತ್ತು ಇದು ಮೈಗ್ರೇನ್‌ನ ಲಕ್ಷಣವಾಗಿದೆ. ಅಸ್ತಮಾ ಮೈಗ್ರೇನ್‌ನೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಕಾಯಿಲೆ ಗಳಲ್ಲೊಂದಾಗಿದೆ.

ಬೊಜ್ಜು
ನೀವು ಮೈಗ್ರೇನ್ ಹೊಂದಿದ್ದರೆ ಹೆಚ್ಚವರಿ ದೇಹತೂಕವು ಅದನ್ನು ಇನ್ನಷ್ಟು ಹದಗೆಡಿಸುತ್ತದೆ. ನೀವೂ ಎಂದೂ ಮೈಗ್ರೇನ್‌ಗೆ ಗುರಿಯಾಗಿರದಿದ್ದರೂ ಬೊಜ್ಜು ಅದಕ್ಕೆ ಕಾರಣವಾಗಬಲ್ಲುದು. ದೇಹತೂಕ ಹೆಚ್ಚಾಗುತ್ತಿರುವವರು ಮೈಗ್ರೇನ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

ನೋವಿನ ಕಾಯಿಲೆಗಳು
ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವನ್ನುಂಟು ಮಾಡುವ ಫೈಬ್ರೊಮ್ಯಾಲ್ಗಿಯಾ ಹಾಗೂ ಕುತ್ತಿಗೆ,ಬೆನ್ನು ಮತ್ತು ಭುಜಗಳಲ್ಲಿಯ ದೀರ್ಘಕಾಲೀನ ನೋವು ಸೇರಿದಂತೆ ಹಲವಾರು ನೋವಿನ ಕಾಯಿಲೆಗಳು ವಿವಿಧ ವೆುಗ್ರೇನ್‌ಗಳೊಂದಿಗೆ ಜೊತೆಯಾಗಿ ಸಾಗುವ ಪ್ರವೃತ್ತಿಯನ್ನು ಹೊಂದಿವೆ.

ಜೀರ್ಣ ಸಮಸ್ಯೆಗಳು
ಮೈಗ್ರೇನ್‌ನಿಂದ ಬಳಲುತ್ತಿರುವವರು ಅನ್ನನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿರುತ್ತಾರೆ.

ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್(ಆರ್‌ಎಲ್‌ಎಸ್)
ಇದು ನಿಮ್ಮ ಕಾಲುಗಳನ್ನು ಅಲುಗಾಡಿಸುತ್ತಿರಬೇಕೆಂಬ ತುಡಿತವನ್ನುಂಟು ಮಾಡುವ ಸ್ಥಿತಿಯಾಗಿದೆ ಮತ್ತು ಇದು ನಿಮ್ಮ ದೈನಂದಿನ ಜೀವನ ಹಾಗೂ ನಿದ್ರೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಮಿದುಳಿನಲ್ಲಿಯ ಡೋಪ್‌ಮೈನ್ ಎಂಬ ರಾಸಾಯನಿಕ ಆರ್‌ಎಲ್‌ಎಸ್ ಮತ್ತು ಮೈಗ್ರೇನ್‌ನ ನಡುವೆ ನಂಟನ್ನು ಕಲ್ಪಿಸುತ್ತದೆ. ಡೋಪ್‌ಮೈನ್ ಕಾಲಿನ ಚಲನವಲನ ಮತು ಮೈಗ್ರೇನ್ ಎರಡರಲ್ಲೂ ತನ್ನ ಪಾತ್ರವನ್ನು ಹೊಂದಿದೆ.

Comments are closed.