ಕರಾವಳಿ

ಯುವ ತಲೆಮಾರಿನಲ್ಲಿ ಯಕ್ಷಗಾನಾಸಕ್ತಿ ಬೆಳೆಯಲಿ : ಎಸ್.ಎಸ್.ನಾಯಕ್

Pinterest LinkedIn Tumblr

ತಾಳಮದ್ದಳೆ ಸಪ್ತಾಹದಲ್ಲಿ ನುಳಿಯಾಲು ಕಿಟ್ಟಣ್ಣ ಶೆಟ್ಟಿ ಸಂಸ್ಮರಣೆ

ಮಂಗಳೂರು: ‘ಯಕ್ಷಗಾನ ರಂಗದಲ್ಲಿ ವಿಶೇಷ ಸಾಧನೆ ಮಾಡಿ ಗತಿಸಿಹೋದ ಹಿರಿಯರನ್ನು ನೆನಪು ಮಾಡಿಕೊಳ್ಳುವುದರಿಂದ ಎಳೆಯರಲ್ಲಿ ನಮ್ಮ ಪರಂಪರೆಯ ಬಗ್ಗೆ ಗೌರವ ಮೂಡುತ್ತದೆ.ಅಲ್ಲದೆ ಅದು ಉತ್ತಮ ಕಲಾಸಂಸ್ಕಾರಕ್ಕೆ ನಾಂದಿಯಾಗುತ್ತದೆ. ಆದಷ್ಟು ಯುವಕರನ್ನು ಸೆಳೆಯುವ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಅವರಲ್ಲಿ ಯಕ್ಷಗಾನಾಸಕ್ತಿ ಬೆಳೆಯುವಂತೆ ಮಾಡಬೇಕು’ ಎಂದು ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಎಮ್ ಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಆರನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2018’ ದ ಆರನೇ ದಿನ ಹವ್ಯಾಸಿಯಕ್ಷಗಾನ ಕಲಾವಿದ, ದೈವದ ಗಡಿಕಾರ ದಿ.ನುಳಿಯಾಲು ಕಿಟ್ಟಣ್ಣ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.

ಸಂಸ್ಮರಣಾ ಭಾಷಣ ಮಾಡಿದ ಮಾತಾ ಡೆವಲಪರ್ಸ್ ನ ಎನ್.ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ‘ಸುಬ್ರಹ್ಮಣ್ಯ ಮೇಳದಲ್ಲಿ ಪುಂಡುವೇಷಧಾರಿಯಾಗಿ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದ ದಿ.ನುಳಿಯಾಲು ಕಿಟ್ಟಣ್ಣ ಶೆಟ್ಟರು ಮುಂದೆ ಹವ್ಯಾಸಿ ಸಂಘಗಳಲ್ಲಿ ಗುರುತಿಸಿಕೊಂಡರು.ದೈವಾರಾಧಕರಾಗಿ,ಪ್ರಗತಿಪರ ಕೃಷಿಕರಾಗಿ ಮಾಣಿ-ಅರೆಬೆಟ್ಟು ಪರಿಸರದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದರು’ ಎಂದರು. ರತ್ನಗಿರಿಯ ಉದ್ಯಮಿ ಎನ್.ಚಿತ್ತರಂಜನ್ ಶೆಟ್ಟಿ ನುಡಿನಮನ ಸಲ್ಲಿಸಿದರು.

ಎಸ್.ಡಿ.ಎಮ್.ಉದ್ಯಮಾಡಳಿತ ಕಾಲೇಜಿನ ಪ್ರಾಂಶುಪಾಲರಾದ ಅರುಣಾ ಕಾಮತ್,ತಷಾ ಪ್ರಿಕಾಸ್ಟ್ ಇಂಡಸ್ಟ್ರೀಸ್ ನ ವಚನ್ ಶೆಟ್ಟಿ ಬಿ.ಸಿ.ರೋಡ್ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ,ಪ್ರಸ್ತಾವನೆಗೈದರು. ಕೋಶಾಧಿಕಾರಿ ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು.ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಸಮಿತಿ ಸದಸ್ಯರಾದ ವಕ್ವಾಡಿ ಶೇಖರ ಶೆಟ್ಟಿ,ಎಂ‌.ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶ ಆಚಾರ್ಯ ಗೇರುಕಟ್ಟೆ . ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ, ನಿವೇದಿತಾ ಎನ್.ಶೆಟ್ಟಿ ಉಪಸ್ಥಿತರಿದ್ದರು.

ಕೊನೆಯಲ್ಲಿ ಭವ್ಯಶ್ರೀ ಕುಲ್ಕುಂದ ಮತ್ತು ಪ್ರಶಾಂತ ರೈ ಮುಂಡಾಲ ಅವರ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ‘ದೇವಯಾನಿ ಕಲ್ಯಾಣ’ ಕಲ್ಯಾಣ ಸಪ್ತಕದ ಆರನೇ ತಾಳಮದ್ದಳೆ ಜರಗಿತು.

Comments are closed.