ಕರಾವಳಿ

ಕೆಲಸ ನಿರಾಕರಿಸಲ್ಪಟ್ಟ ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯೆದುರು ಧರಣಿ ಸತ್ಯಾಗ್ರಹ

Pinterest LinkedIn Tumblr

ಮಂಗಳೂರು : ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ವಿನಾಃ ಕಾರಣ ಕೆಲಸ ನಿರಾಕರಣೆ ಮಾಡಿದ ಸಾಯಿ ಸೆಕ್ಯುರಿಟೀಸ್ ಸಂಸ್ಥೆಯ ವಿರುದ್ದ ಮತ್ತು ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ಜಿಲ್ಲಾ ಅಧೀಕ್ಷಕರ ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಶುಕ್ರವಾರ CITU ನೇತ್ರತ್ವದಲ್ಲಿ ನಗರದ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯೆದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕೆಲಸದಿಂದ ನಿರಾಕರಿಸಲ್ಪಟ್ಟ 10 ಮಂದಿ ಕಾರ್ಮಿಕರು ಹಾಗೂ CITU ಕಾರ್ಯಕರ್ತರು ಸೇರಿ ನಡೆಸಿದ ಧರಣಿ ಸತ್ಯಾಗ್ರಹವನ್ನು CITU ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ರವರು ಉದ್ಘಾಟಿಸುತ್ತಾ, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 10 ಮಂದಿ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ವಿನಾಃ ಕಾರಣ ಕೆಲಸದಿಂದ ವಜಾ ಮಾಡಿರುವುದು ತೀರಾ ಖಂಡನೀಯ.ಆಸ್ಪತ್ರೆಯ ಒಳಗಡೆ ಅಕ್ರಮವಾಗಿ ಹಾಗೂ ದುರಾಹಂಕಾರದಿಂದ ವರ್ತಿಸುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುವ ಜಿಲ್ಲಾ ಅಧೀಕ್ಷಕರು ಇಲ್ಲಿ ನಡೆಯುವ ಎಲ್ಲಾ ಅಕ್ರಮ ಅವ್ಯವಹಾರಗಳಿಗೆ ಕಾರಣವಾಗಿರುವುದರಿಂದ ಸಮಗ್ರ ತನಿಖೆಯಾಗಬೇಕಾಗಿದೆ. ಕಾರ್ಮಿಕರ ಮರು ನೇಮಕವಾಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಕಳೆದುಕೊಂಡ ಕಾರ್ಮಿಕರ ಬವಣೆಯನ್ನು ವಿವರಿಸುತ್ತಾ, ಕಾರ್ಮಿಕರ ಹೋರಾಟವನ್ನು ಮುರಿಯಲು ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರು ಪೋಲೀಸರನ್ನು ಛೂ ಬಿಟ್ಟು ನಡೆಸಿದ ಕುತಂತ್ರಗಳನ್ನು ಖಂಡಿಸಿದರು.

ಮುಂದುವರಿಸುತ್ತಾ, ಸರಕಾರದ ನಿಯಮದ ವಿರುದ್ದ ಕಳೆದ 5 ವರ್ಷಗಳಿಂದಲೂ ಇಲ್ಲಿಯೇ ಠಿಕ್ಕಾಣಿ ಹೂಡಿರುವ ಜಿಲ್ಲಾ ಅಧೀಕ್ಷಕರು ವೆನ್ಲಾಕ್ ಆಸ್ಪತ್ರೆಯನ್ನೇ ಸರ್ವನಾಶಗೈಯಲು ಪ್ರಯತ್ನಿಸುತ್ತಿದ್ದಾರೆ. ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವಲ್ಲಿ ಅಧೀಕ್ಷಕರ ಪಾತ್ರವೇ ಮುಖ್ಯವಾದದ್ದು ಎಂದು ಹೇಳಿದರು.

ಧರಣಿಯನ್ನು ಬೆಂಬಲಿಸಿ CITU ಜಿಲ್ಲಾ ನಾಯಕರಾದ ಜಯಂತ ನಾಯಕ್, DYFI ಜಿಲ್ಲಾ ನಾಯಕರಾದ ಬಿ.ಕೆ.ಇಮ್ತಿಯಾಜ್,ನವೀನ್ ಕೊಂಚಾಡಿ,ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ದಿನೇಶ್ ಶೆಟ್ಟಿ,ವಸಂತ,ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ನಾಯಕರಾದ ತಿಮ್ಮಯ್ಯ ಕೊಂಚಾಡಿ,ಅಟೋರಿಕ್ಷಾ ಚಾಲಕರ ಸ್ಟಾನ್ಲಿ ನೊರೊನ್ಹಾ,ಸಾಮಾಜಿಕ ಚಿಂತಕರಾದ ಸುಜಾತ ಸುವರ್ಣರವರು ಮಾತನಾಡುತ್ತಾ,ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು.

Comments are closed.