ಕರಾವಳಿ

ಸಲಿಂಗ ಕಾಮ ಅಪರಾಧವಲ್ಲ, ಆದ್ರೆ ಈ ಬಗ್ಗೆ ಸಮಾಜಕ್ಕೆ ಮಾಹಿತಿಯೇ ಇಲ್ಲ: ಸಂಜೀವ ವಂಡ್ಸೆ

Pinterest LinkedIn Tumblr

ಉಡುಪಿ: ದೇಶದ ಸರ್ವೋಚ್ಚ ನ್ಯಾಯಾಲಯವು ಸೆ.೬ ರಂದು ಸಲಿಂಗ ಕಾಮ ಅಪರಾಧವಲ್ಲ ಎನ್ನುವ ತೀರ್ಪು (ಸೆಕ್ಷನ್ 377) ಪ್ರಕಟಿಸಿದ್ದು ಇದನ್ನು LGBT ಸಮುದಾಯದ ಪರವಾಗಿ ಸಂಗಮ ಮತ್ತು ಆಸರೆ ಸಮುದಾಯ ಸಂಸ್ಥೆ ಸ್ವಾಗತಿಸುತ್ತಿದೆ. ಆದರೆ ಇದು ಕೇವಲ ಎಲ್.ಜಿ.ಬಿ.ಟಿ ಸಮುದಾಯಕ್ಕೆ ಮಾತ್ರವೇ ಅನ್ವಯವಾಗದೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾದರೂ ಕೂಡ ಸೆಕ್ಷನ್ 377 ತೊಂದರೆಗೆ ಮಾತ್ರ ಎಲ್.ಜಿ.ಬಿ.ಟಿ ಸಮುದಾಯ ಒಳಗಾಗುತ್ತಿರುವುದು ದುರಂತವಾಗಿದೆ. ಐಪಿಸಿ ಸೆಕ್ಷನ್  377ದ ಸಲಿಂಗಕಾಮ ಅಪರಾದಪಟ್ಟ ಕಳಚಿದ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವು ಸರಕಾರಿ ಸಿಬ್ಬಂದಿಗಳಿಗೆ, ಜನಪ್ರತಿನಿಧಿಗಳು ಮತ್ತು ಸಮಾಜಕ್ಕೆ ಸ್ಪಷ್ಟ ಮಾಹಿತಿ ನೀಡಬೇಕಿದೆ ಎಂದು ಉಡುಪಿಯ ಆಸರೆ ಸಮುದಾಯ ಸಂಸ್ಥೆ ಮತ್ತು ಸಂಗಮ ಒತ್ತಾಯಿಸಿದೆ.

ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಆಸರೆ ಸಂಸ್ಥೆಯ ಸಂಜೀವ ವಂಡ್ಸೆ ಮಾತನಾಡಿ, 20 ವರ್ಷಗಳ ಕಾಲ ನಮ್ಮ ಸಮುದಾಯದವರು ಮಾಡಿದ ನಿರಂತರ ಹೋರಾಟ ಸಿಕ್ಕಿದೆ. ಸುಪ್ರೀಂ ಕೋರ್ಟಿನ ಐದು ಮಂದಿ ನ್ಯಾಯಾಧೀಶರಿದ್ದ ಪೀಠವು ಒಮ್ಮತದಿಂದ ಸಂವಿಧಾನದಲ್ಲಿ ಸಿಗಬೇಕಾದ ಮೂಲಭೂತ ಹಕ್ಕನ್ನು ಎತ್ತಿಹಿಡಿದಿದೆ. ನಮ್ಮ ಸಮುದಾಯದವರು ಮಾತ್ರವೇ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆಂಬ ಅಭಿಪ್ರಾಯವಿದ್ದರಿಂದ ಪೊಲೀಸ್ ದೌರ್ಜನ್ಯ ಹಾಗ್ಯ್ ಸಾಮಾಜಿಕ ಕಳಂಕ ಹೊತ್ತಿದ್ದೇವು. ಇನ್ನಾದರೂ ಇಂತಹ ಅವ್ಯವಸ್ಥೆಗಳು ಪುನರಾವರ್ತನೆಯಾಗಬಾರದು ಎಂದರು.

ನಾವು ಕೇವಲ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ನೈತಿಕತೆಯಲ್ಲಿ ಬದುಕಲು ಇಚ್ಚಿಸುತ್ತೇವೆ. ನಮ್ಮ ಮೇಲೆ ಸಾಮಾಜಿಕ ಮತ್ತು ಧಾರ್ಮಿಕ ನೈತಿಕತೆಯನ್ನು ಹೇರುವವರ ವಿರುದ್ಧ ಶಾಂತಿಯುತ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದರು.

ಸಂಗಮ ಸಂಸ್ಥೆಯ ಮಹೇಶ್ ಪಾಟೀಲ್, ಆಸರೆ ಸಂಸ್ಥೆಯ ದೀಪಿಕಾ, ಲಾವಣ್ಯ, ಸುದರ್ಶನ ಮೊದಲಾದವರಿದ್ದರು.

ಹಕ್ಕೊತ್ತಾಯ….
* ಐಪಿಸಿ ಸೆಕ್ಷನ್ 377ರ ಸಲಿಂಗಕಾಮ ಅಪರಾದಪಟ್ಟ ಕಳಚಿದ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವು ಸರಕಾರಿ ಸಿಬ್ಬಂದಿಗಳಿಗೆ, ಜನಪ್ರತಿನಿಧಿಗಳು ಮತ್ತು ಸಮಾಜಕ್ಕೆ ಸ್ಪಷ್ಟ ಮಾಹಿತಿ ನೀಡಬೇಕಿದೆ.
* ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಮೈತ್ರಿ ಯೋಜನೆ ಮತ್ತು ಕಾನೂನಾತ್ಮಕ ದಾಖಲಾತಿ (ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ) ಬಗ್ಗೆ ಸರಕಾರಿ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಿ ಅನುಷ್ಟಾನಗೊಳಿಸಬೇಕು.
* ಉಡುಪಿ ಜಿಲ್ಲಾ ಪಂಚಾಯತ್ ಮತ್ತು ನಗರಸಭೆ ವತಿಯಿಂದ ಈ ಸಮುದಾಯಕ್ಕೆ ಮನೆ ಹಾಗೂ ಉದ್ಯೋಗ ನೀಡಿ ಪ್ರೋತ್ಸಾಹಿಸಬೇಕು.

Comments are closed.