ಮಂಗಳೂರು : ನಗರದ ಮಾಲ್‌ಗಳಲ್ಲಿಗಳಲ್ಲಿರುವ ಮಲ್ಟಿಪ್ಲೆಕ್ಷ್ ಸಿನಿಮಾ ಮಂದಿರಗಳಲ್ಲಿ ತುಳು ಸಿನಿಮಾಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟದ ನಿಯೋಗ ಶುಕ್ರವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ಗೆ ಮನವಿ ಸಲ್ಲಿಸಿದೆ.
ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ತುಳುಭಾಷಿಗರು ಅಧಿಕ ಸಂಖ್ಯೆಯಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ತುಳು ಸಿನಿಮಾಗಳು ಕೂಡಾ ಬಿಡುಗಡೆಗೊಳ್ಳುತ್ತಿವೆ. ಆದರೆ, ಅವುಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳ ಕೊರತೆ ಇದ್ದು, ಇದರಿಂದ ವೀಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದೆ. ಆದಾಗ್ಯೂ ನಗರದ ಮಾಲ್‌ಗಳಲ್ಲಿ (ಭಾರತ್‌ಮಾಲ್, ಸಿಟಿ ಸೆಂಟರ್, ಫೋರಂ ಮಾಲ್, ಕಲ್ಪನಾ)ಗಳಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಅಲ್ಲಿ ಅಧಿಕ ಬಾಡಿಗೆ ನೀಡಲು ಒತ್ತಾಯಿಸುವುದರಿಂದ ತುಳು ಸಿನಿಮಾ ರಂಗ ಆರ್ಥಿಕವಾಗಿ ತತ್ತರಿಸುತ್ತಿವೆ.
ತುಳು ಸಿನಿಮಾ ನಿರ್ಮಾಪಕರು 50 ಲಕ್ಷ ರೂ. ಬಂಡವಾಳ ಹೂಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಮಾಲ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ದುಬಾರಿ ಬಾಡಿಗೆ ನೀಡಬೇಕಾಗುತ್ತದೆ. ಅಲ್ಲದೆ ಕನ್ನಡ ಮತ್ತು ತುಳು ಸಿನಿಮಾದ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ತುಳು ಸಿನಿಮಾ ರಂಗದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ತುಳು ಸಿನಿಮಾ ರಂಗ ಉಳಿಸಲು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಪ್ರವೀಣ್ (ಪಮ್ಮಿ) ಕೋಡಿಯಾಲ್‌ಬೈಲ್, ಪ್ರಮುಖರಾದ ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಮೋಹನ್ ಕೊಪ್ಪಳ, ಆರ್. ಧನರಾಜ್, ಗಂಗಾಧರ ಶೆಟ್ಟಿ, ರಾಜೇಶ್ ಅಳಪೆ, ಪ್ರದೀಪ್ ಆಳ್ವ,ರೂಪೇಶ್ ಶೆಟ್ಟಿ, ಆಶಿಕ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಧರ್ಮನಗರ, ಅಶ್ವಿನಿ ಕೋಟ್ಯಾನ್, ಯಶವಂತ ಶೆಟ್ಟಿ ಕೃಷ್ಣಾಪುರ, ಲಕ್ಷ್ಮೀಶ, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು.
Comments are closed.