ಕರಾವಳಿ

ನ. 4: ಕುದ್ರೋಳಿ ಶ್ರೀಕ್ಷೇತ್ರದಲ್ಲಿ ನಮ್ಮ ಕುಡ್ಲ ಗೂಡುದೀಪ ಪಂಥ – ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು, ನ.03: ದೀಪಾವಳಿ ಪ್ರಯುಕ್ತ ನಮ್ಮ ಕುಡ್ಲ ವಾಹಿನಿ ಪ್ರತಿವರ್ಷ ಹಮ್ಮಿಕೊಂಡು ಬಂದಿರುವ ಗೂಡುದೀಪ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನ.4ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿದೆ.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಮ್ಮ ಕುಡ್ಲದ ನಿರ್ದೇಶಕ ಹರೀಶ್ ಬಿ. ಕರ್ಕೇರಾ ಅವರು, ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ ಹಾಗೂ ತೃತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಬೆಳ್ಳಿಯ ಪದಕ ಬಹುಮಾನವಾಗಿ ನೀಡಲಾಗುತ್ತದೆ ಎಂದರು.

ಅತೀ ಹೆಚ್ಚು ಗೂಡುದೀಪ ತರುವ ಸಂಸ್ಥೆಗಳಿಗೆ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ. ಅಲ್ಲದೆ ತೀರ್ಪುಗಾರರ ಮೆಚ್ಚುಗೆ ಪಡೆದ ಆಯ್ದ ಗೂಡುದೀಪಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಸ್ಮರಣಿಕೆ, ಸಿಹಿ ತಿಂಡಿಯ ಪೊಟ್ಟಣ ಹಾಗೂ ಕ್ಷೇತ್ರದ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದರು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮ :

ಈ ಬಾರಿ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್‌ಗೆ ‘ನಮ್ಮ ತುಳುವೆರ್ ಪ್ರಶಸ್ತಿ’, ದಿಯಾ ಸಿಸ್ಟಂ ಸಂಸ್ಥೆಯಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಉದ್ಯೋಗವನ್ನು ಸ್ಥಳೀಯರಿಗೆ ಒದಗಿಸಿ ಕೊಟ್ಟ ಡಾ.ವಿ.ರವಿಚಂದ್ರನ್‌ಗೆ ‘ನಮ್ಮ ಕುಡ್ಲ ಪ್ರಶಸ್ತಿ’, ಯೋಧ ಎಂ.ಗಿರಿಯಪ್ಪಗೆ ‘ನಮ್ಮ ಕುಡ್ಲ ಸಾಧನಾ ಪ್ರಶಸ್ತಿ’ ಹಾಗೂ ಮಣ್ಣಗುಡ್ಡೆ ಶಾಲೆಯನ್ನು ದತ್ತು ಸ್ವೀಕರಿಸಿ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಬರ್ಕೆ ಫ್ರೆಂಡ್ಸ್ ಮಣ್ಣಗುಡ್ಡೆಗೆ ‘ಬಿ.ಪಿ. ಕರ್ಕೇರಾ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ ಎಂದರು.

ಸಂಸ್ಥೆಯ ಪಾಲುದಾರ ಲೀಲಾಕ್ಷ ಬಿ. ಕರ್ಕೇರಾ, ಪ್ರಮುಖರಾದ ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಎಸ್. ಕೋಟ್ಯಾನ್, ದಯಾನಂದ ಕಟೀಲು ಮುಂತಾದವರು ಪತ್ರಿಕಾಗೋಸ್ಃಥಿಯಲ್ಲಿ ಉಪಸ್ಥಿತರಿದ್ದರು.

Comments are closed.