ಕರಾವಳಿ

ಸುರತ್ಕಲ್ ಸರಗಳ್ಳತನ ಪ್ರಕರಣ : ಸೊತ್ತು ಸಮೇತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.28: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ನಡೆದ ಪ್ರತ್ಯೇಕ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಧಿಸಿರುವ ಸುರತ್ಕಲ್ ಠಾಣಾ ಪೊಲೀಸರು ಆರೋಪಿಯಿಂದ ಕಳವಿಗೆ ಸಂಬಂಧಿಸಿದ ಸುಮಾರು 1.55 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಪೆರ್ಮನ್ನೂರು ನಿವಾಸಿ ಹಬೀಬ್ ಹಸನ್ ಯಾನೆ ಹಬ್ಬಿ ಯಾನೆ ಹಬೀಬ್ (39) ಎಂದು ಗುರುತಿಸಲಾಗಿದೆ.

ಸೆ.10ರಂದು ಕಾಟಿಪಳ್ಳ 5ನೇ ಬ್ಲಾಕ್‌ನಲ್ಲಿ ಸಂಜೀವಿನಿ ಎಂಬವರು ಅಂಗಡಿಗೆ ದಿನಸಿ ತರಲು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಕತ್ತಿನಿಂದ ಕರಿಮಣಿಯನ್ನು ಸೆಳೆದು ಪರಾರಿಯಾಗಿದ್ದರು.ಸೊತ್ತಿನ ಮೌಲ್ಯ ರೂ. 65,000/-ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಇನ್ನೊಂದು ಪ್ರಕರಣದಲ್ಲಿ ಸೆ.12ರಂದು ಭವಾನಿ ರಾವ್ ಎಂಬವರು 1ನೇ ಬ್ಲಾಕ್‌ನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಗೇಟಿನ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಕರಿಮಣಿ ಮತ್ತು ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಸುಮಾರು 16 ಗ್ರಾಂ ತೂಕದ ಬಂಗಾರದ ಕರಿಮಣಿ ಮತ್ತು 16 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. ಈ ಎರಡೂ ಪ್ರಕರಣಗಳ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯಿಂದ ಎರಡೂ ಪ್ರಕರಣಕ್ಕೆ ಸಂಭಂದಿಸಿದಂತೆ 7 ಪವನ್ ತೂಕದ ಒಟ್ಟು 2 ಕರಿಮಣಿ ಸರ ಮತ್ತು 1 ಚಿನ್ನದ ಸರಗಳನ್ನು ವಶಪಡಿಸಲಾಗಿದೆ. ವಶಪಡಿಸಿದ ಸೊತ್ತುಗಳ ಮೌಲ್ಯ 1.55 ಲಕ್ಷ ರೂ.ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಯ ಜೊತೆಯಲ್ಲಿ ಸುರತ್ಕಲ್ ಠಾಣಾ ಕೃತ್ಯದಲ್ಲಿ ಬಾಗಿಯಾದ ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಉಪ ಪೊಲೀಸ್ ಆಯುಕ್ತರು(ಕಾನೂನು ಮತ್ತು ಸುವ್ಯವಸ್ಥೆ)ರಾದ ಹನುಮಂತರಾಯ ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಶ್ರೀಮತಿ ಉಮಾ ಪ್ರಶಾಂತ್, ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ.ಡಿ.ಎಸ್ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ.ಜಿ ರವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಸುಂದರಿ ಕೆ. ಹಾಗೂ ಠಾಣಾ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರರುತ್ತಾರೆ.

Comments are closed.