ಕರಾವಳಿ

ಕೋಮುವಾದಿ ಪಕ್ಷವನ್ನು ಜನರು ತಿರಸ್ಕರಿಸುತ್ತಾರೆ: ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ವಾಗ್ದಾಳಿ

Pinterest LinkedIn Tumblr

ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿಗಳನ್ನು ದೂರ ಇಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿ‌ಎಸ್‌ನ ಹಿರಿಯ ನಾಯಕರುಗಳು ಅಳೆದು ತೂಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದಾರೆ ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಅವರು ಮಂಗಳವಾರ ಮಧ್ಯಾಹ್ನ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟೀಯನ್ನುದ್ದೇಶಿಸಿ ಮಾತನಾಡಿದರು.

ಕೇವಲ ಭಾಷಣಗಳಿಂದ ಬಡವನ ಹೊಟ್ಟೆ ತುಂಬಲ್ಲ. ಕೇಂದ್ರದಲ್ಲಿರುವ ಸರ್ಕಾರ ಮತ್ತು ಬಿಜೆಪಿ ನಾಯಕರುಗಳು ಬಣ್ಣಬಣ್ಣದ ಮಾತುಗಳನ್ನಾಡಿ ಮೋಡಿ ಮಾಡುತ್ತಾರೆ ವಿನಃ ಬಡವರಿಗೆ ಸಹಾಯವಾಗುವ ಯೋಜನೆ ಇದುವರೆಗೂ ರೂಪಿಸಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಲಿಲ್ಲ. ಕೊಟ್ಟ ಭರವಸೆಗಳನ್ನು ಈಡೇಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ಮೋಡಿಯ ಮಾತುಗಳನ್ನಾಡಿ ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಗಮನದಲ್ಲಿಟ್ಟುಕೊಂಡು ಮತದಾರರು ಆಲೋಚನೆ ಮಾಡಿ ಈ ಭಾರಿಯ ಚುನಾವಣೆಯಲ್ಲಿ ಮತಗಳನ್ನು ನೀಡಬೇಕು ಎಂದು ಸಚಿವ ನಾಡಗೌಡ ಮನವಿ ಮಾಡಿಕೊಂಡರು.

ಜನರ ಸಂಕಷ್ಟ ಆಲಿಸದ ಯಡಿಯೂರಪ್ಪ!
ಹಿಂದೆ ಭಾರತೀಯ ಜನತಾ ಪಕ್ಷದ ನಾಯಕರ ಮೋಡಿಯ ಮಾತಿಗೆ ಜನರು ಬಲಿಯಾಗಿ ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ಈ ಕ್ಷೇತ್ರದಲ್ಲಿ ತಾಂಡವವಾಡುತ್ತಿವೆ. ಈ ಭಾಗದ ಸಂಸದರಾಗಿ ಯಡಿಯೂರಪ್ಪನವರು ಇಲ್ಲಿನ ಜನರ ಸಂಕಷ್ಟಗಳನ್ನು ಆಲಿಸಿಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೂಡ ನೀಡಲಿಲ್ಲ. ಕ್ಷೇತ್ರದ ಜನರು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಕೊಟ್ಟ ಭರವಸೆ ಈಡೇರಿಸದ ಬಿಜೆಪಿಯ ವಿರುದ್ದ ತಿರುಗಿಬಿದ್ದಿದ್ದಾರೆ ಎಮ್ದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಸ್. ರಾಜು ಪೂಜಾರಿ, ಎಸ್. ಮದನ್‌ಕುಮಾರ್, ಜೆಡಿ‌ಎಸ್‌ನ ಯೋಗೀಶ ಶೆಟ್ಟಿ, ವಾಸುದೇವ ರಾವ್, ರವಿ ಶೆಟ್ಟಿ, ಸಂದೇಶಭಟ್, ಅನಿತಾ ಶೆಟ್ಟಿ ಇದ್ದರು.

Comments are closed.