ಕರಾವಳಿ

ಮಂಗಳೂರಿಗೆ ಆಗಮಿಸಿದ ಗಾಂಧಿ ಅಭಿಯಾನ- 150 ಜಾಥಾ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 16 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಅಭಿಯಾನ- 150 ಜಾಥಾ ಸೋಮವಾರ ಮಂಗಳೂರಿಗೆ ಆಗಮಿಸಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಪ್ರಮೀಳಾ ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ಈ ನಿಟ್ಟಿನಲ್ಲಿ ಇದನ್ನು ನಿರಂತರವಾಗಿ ಪಾಲಿಸುತ್ತಾ ಬರಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು ದೇಶವನ್ನು ಯಾವುದೇ ಹಿಂಸೆ, ಅನ್ಯಾಯ ಇಲ್ಲದೇ ಪ್ರಗತಿಯತ್ತ ಕೊಂಡೊಯ್ಯುವತ್ತ ಗುರಿಯಿಟ್ಟಿತ್ತು. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಗಾಂಧೀ 150ನೇ ಜಯಂತಿ ಪ್ರಯುಕ್ತ ಅಭಿಯಾನ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಾಂಧೀ ಅಭಿಯಾನ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಮಹಾತ್ಮಾ ಗಾಂಧೀ ಶಾಂತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಇಸ್ಮಾಯಿಲ್, ಸೇವಾದಳದ ಮುಖಂಡರಾದ ಟಿ.ಕೆ. ಸುಧೀರ್, ಪ್ರಭಾಕರ ಶ್ರೀಯಾನ್, ಬದ್ರಿಯಾ ಕಾಲೇಜು ಪ್ರಾಂಶುಪಾಲ ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಗಾಂಧೀಜಿಯವರ ಸಂದೇಶಗಳನ್ನು ಸಾರುವ ಸ್ಥಬ್ಧಚಿತ್ರ ಹಾಗೂ ಗಾಂಧೀಜಿಯವರ ಪ್ರಿಯ ಭಜನೆ, ಸಂಗೀತಗಳನ್ನು ಸಾರುತ್ತಾ ಈ ಅಭಿಯಾನ ಸಂಚರಿಸಲಿದೆ.

Comments are closed.