ಕುಂದಾಪುರ: ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಮುಖ್ಯ ಜಂಕ್ಷನ್ ಪ್ರದೇಶವಾಗಿರುವ ಕುಂದಾಪುರದ ಬಸ್ರೂರು ಮೂರುಕೈಯಲ್ಲಿ ಹೆದ್ದಾರಿ ಚತುಷ್ಪತ ಗುತ್ತಿಗೆ ಕಂಪೆನಿ ನವಯುಗ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆಯೆನ್ನುವ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಜೊತೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ನವಯುಗ ಎಂಜಿನಿಯರ್ ಹಾಗೂ ನಾಗರಿಕ ಜಾಗೃತಿ ಸಮಿತಿಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಬಸ್ರೂರು ಮೂರುಕೈ ಸರ್ಕಲ್‌ನಲ್ಲಿ ಫ್ಲೈಒವರ್ ನಿರ್ಮಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿತ್ತು. ಇದೀಗ ಗುತ್ತಿಗೆ ಕಂಪೆನಿಯವರು ಏಕಾಏಕಿಯಾಗಿ ಸಾರ್ವಜನಿಕರಿಗೆ ಮಾಹಿತಿ ನೀಡದೆ ಹೆದ್ದಾರಿ ಬಂದ್ ಮಾಡಿ ಅಂಡರ್‌ಪಾಸ್ ಕಾಮಗಾರಿಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಘನವಾಹನಗಳು ಬಂತೆಂದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾಹನ ಸವಾರರು ಈ ತೊಂದರೆಯನ್ನು ಅನುಭವಿಸಬೇಕು. ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಒವರ್ ಕಾಮಗಾರಿ ಮುಗಿದ ಬಳಿಕ ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಿ. ಈ ಅವಧಿಯಲ್ಲಿ ನಾವು ಫ್ಲೈಒವರ್‌ಗಾಗಿ ಹೋರಾಟ ನಡೆಸುತ್ತೇವೆ ಎಂದು ನಾಗರಿಕ ಜಾಗೃತಿ ಸಮಿತಿಯ ಪ್ರಮುಖರು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಏಕಕಾಲದಲ್ಲಿ ಫ್ಲೈ ಓವರ್ ಹಾಗೂ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ನಡೆಸಿ ಶೀಘ್ರ ಪರಿಪೂರ್ಣಗೊಳಿಸಲು ನವಯುಗ ಕಂಪೆನಿಗೆ ಸೂಚಿಸಿದ್ದು ಅವರು ಕೂಡ ಒಪ್ಪಿಗೆ ಸೂಚಿಸಿ ವೇಗಗತಿಯಲ್ಲಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದು ಇದಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಈಗಾಗಲೇ ಸವಾರರಿಗೆ ಸಮಸ್ಯೆಯಾಗದಂತೆ ಸರ್ವೀಸ್ ರಸ್ತೆಯನ್ನು ವಾಹನ ಸವಾರಕ್ಕೆ ಅನುವು ಮಾಡಿಕೊಡಲಾಗಿದೆ. ಸರ್ವೀಸ್ ರಸ್ತೆಯಲ್ಲಿ ಎಲ್ಲಾ ವಾಹನಗಳು ಬಂದರೆ ಟ್ರಾಫಿಕ್ ಜಾಮ್ ಆಗುವ ಸಂಭವಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬಸ್ರೂರು ಮೂರುಕೈಯಲ್ಲಿ ಕಾಮಗಾರಿ ನಡೆಸಲು ಹೆದ್ದಾರಿ ಬಂದ್ ಮಾಡಲೇಬೇಕು. ಗುತ್ತಿಗೆ ಕಂಪೆನಿಯವರ ಪ್ಲ್ಯಾನಿಂಗ್ ಬದಲಿಸಲು ಸಾಧ್ಯವಿಲ್ಲ. ಆದರೂ ಹೆದ್ದಾರಿ ಪ್ರಾಧಿಕಾರದವರ ಜೊತೆ ಚರ್ಚೆ ನಡೆಸಲಾಗುತ್ತೆ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಉಪವಿಭಾಗಾಧಿಕಾರಿ ಟಿ.ಭೂಬಾಲನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಠಾಣಾಧಿಕಾರಿ ಹರೀಶ್ ಆರ್, ನಾಯ್ಕ್, ಟ್ರಾಫಿಕ್ ಪಿಎಸ್‌ಐಗಳಾದ ರತ್ನಾಕರ್ ವಿ ನಾಗೇಕರ್, ಪುಷ್ಪ ಹಾಗೂ ನಾಗರಿಕ ಜಾಗೃತಿ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ನರೇಂದ್ರ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿ, ಲಾರಿ ಮಾಲಕ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಸದಸ್ಯ ಗಿರೀಶ್ ಜಿಕೆ, ಡಿವೈಎಫ್‌ಐ ಮುಖಂಡ ರವಿ ವಿ.ಎಂ ಮೊದಲಾದವರು ಇದ್ದರು.
Comments are closed.