ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್‌ : 28.63 ಕೋಟಿ ರೂ.ಗಳ ದಾಖಲೆಯ ಲಾಭ – ಸತತ 23 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ಸಾಧನೆ : ಡಾ.ಎಂ.ಎನ್.ಆರ್

Pinterest LinkedIn Tumblr

ಮಂಗಳೂರು, ಆಗಸ್ಟ್.11: ಅಭಿವೃದ್ಧಿಯ ಮೂಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) 31 – 03 – 2018ಕ್ಕೆ ಅಂತ್ಯವಾದ ಅರ್ಥಿಕ ವರ್ಷದಲ್ಲಿ 28.63 ಕೋಟಿ ರೂ.ಗಳ ದಾಖಲೆಯ ಲಾಭ ಗಳಿಸಿದ್ದು, ಇದು ಬ್ಯಾಂಕಿನ 104 ವರ್ಷಗಳ (ಸೇವೆಯಲ್ಲಿ) ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಭಾಂಗಣ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ವಾರ್ಷಿಕ ಪ್ರಗತಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.ವಿಶಿಷ್ಟ ಹಾಗೂ ವಿನೂತನ ಬ್ಯಾಂಕಿಗ್ ಸೇವೆ ನೀಡುವ ಮೂಲಕ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಎಸ್‌ಸಿಡಿಸಿಸಿ 2017ರಲ್ಲಿ 24.07 ಕೋಟಿ ರೂ. ಲಾಭವನ್ನು ಗಳಿಸಿದ್ದು, ಈ ಬಾರಿ ಶೇ. 19ರಷ್ಟು ಏರಿಕೆಯನ್ನು ಕಂಡಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನಲ್ಲಿ 6748.84 ಕೋಟಿ ರೂ.ಗಳ ಒಟ್ಟು ವ್ಯವಹಾರ ದಾಖಲಿಸಿದ್ದು, 2018-19ನೆ ಸಾಲಿಗೆ 7700 ಕೋಟಿ ರೂ.ಗಳ ವ್ಯವಹಾರದ ಗುರಿಯನ್ನು ಹೊಂದಿದೆ. ಇದೇ ಅವಧಿಯಲ್ಲಿ ಬ್ಯಾಂಕ್ ತನ್ನ 105 ಶಾಖೆಗಳ ಮೂಲಕ 3561.24 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಿ ಶೇ. 11ರಷ್ಟು ಏರಿಕೆಯನ್ನು ಸಾಧಿಸಿದೆ. ಈ ಮೂಲಕ ಠೇವಣಿ ಸಂಗ್ರಹದಲ್ಲಿಯೂ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಆರ್ಥಿಕ ಹಿನ್ನಡೆಯ ಹೊರತಾಗಿಯೂ ಬ್ಯಾಂಕ್ 2778.30 ಕೋಟಿ ರೂ. ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 1100.13 ಕೋಟಿ ರೂ., ಮಧ್ಯಮಾವಧಿ ಸಾಲ 99.35 ಕೋಟಿ ರೂ. ಸೇರಿ ಕೃಷಿ ಕ್ಷೇತ್ರಕ್ಕೆ 1199.48 ಕೋಟಿ ರೂ. ಸಾಲ ನೀಡಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 3187.60 ಕೋಟಿ ರೂ.ಗಳಾಗಿದೆ ಎಂದು ಅವರು ತಿಳಿಸಿದರು.

ಸತತ 23 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ಸಾಧನೆ

ಸತತ 23 ವರ್ಷಗಳಿಂದ ಬ್ಯಾಂಕ್ ಕೃಷಿ ಸಾಲ ಮರು ಪಾವತಿಯಲ್ಲಿ ಶೇ. 100ರೊಂದಿಗೆ ರಾಷ್ಟ್ರೀಯ ದಾಖಲೆಯನ್ನು ಮಾಡಿದೆ. 2018ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ. ಜಿಲ್ಲೆಯ 18 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ಸಾಧನೆ ಮಾಡಿವೆ ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.

ಬ್ಯಾಂಕ್‌ನ 960 ಸಂಘಗಳು ಸದಸ್ಯರಾಗಿದ್ದು, ಇವುಗಳ ಪಾಲು ಬಂಡವಾಳ 139.33 ಕೋಟಿ ರೂ.ಗಳಾಗಿವೆ. ದುಡಿಯುವ ಬಂಡವಾಳ 4844.60 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ ಶೇ. 11.65ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.

ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ 84000 ರೈತರಿಗೆ ರುಪೇ ಕಿಸಾನ್ ಕಾರ್ಡ್‌ಗಳನ್ನು ವಿತರಿಸಿದೆ ಎಂದು ಅವರು ತಿಳಿಸಿದರು.

ಮುಂದಿನ ಯೋಜನೆಯಾಗಿ, ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲು ಬ್ಯಾಂಕ್ ಮುಂದಾಗಿದೆ. ಮನೆ ಅಥವಾ ಕಚೇರಿಗಳಲ್ಲಿ ಕುಳಿತು ಮೊಬೈಲ್ ಸಂಪರ್ಕವಿರುವ ಬ್ಯಾಂಕ್‌ನ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಹಕರ ಮೊಬೈಲ್ ಮೂಲಕ ಬ್ಯಾಂಕ್ ಶಾಖೆಗಳ ನಡುವೆ ಹಣ ವರ್ಗಾವಣೆಗೂ ಸಹಕಾರಿಯಾಗಲಿದೆ ಎಂದು ಡಾ. ರಾಜೇಂದ್ರ ಕುಮಾರ್ ವಿವರಿಸಿದರು.

ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜರಾಮ್ ಭಟ್, ಭಾಸ್ಕರ ಎಸ್. ಕೋಟ್ಯಾನ್, ರಘುರಾಮ್ ಶೆಟ್ಟಿ, ಎಸ್. ರಾಜು ಪೂಜಾರಿ, ವಾದಿರಾಜ್ ಶೆಟ್ಟಿ ಎಂ., ದೇವರಾಜ್ ಕೆ.ಎಸ್., ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಶಶಿಕುಮಾರ್‌ ರೈ, ಜಯರಾಮ್ ರೈ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಎನ್. ರಮೇಶ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮಹಾ ಪ್ರಬಂಧಕ ಗೋಪಿನಾಥ್ ಭಟ್ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Comments are closed.