ಕರಾವಳಿ

ಸುಂದರವಾದ ನೀಳವಾದ ಕೇಶರಾಶಿ ನಿಮ್ಮದಾಗಿಸಲು ಈ ಟಿಪ್ಸ್

Pinterest LinkedIn Tumblr

ಮುಖ ಮನಸ್ಸಿನ ಕನ್ನಡಿ ಅನ್ನುತ್ತಾರೆ ,ಈ ಮುಖಕ್ಕೆ ಅಂದ ನೀಡುವುದು ತಲೆಗೂದಲು .ಸ್ತ್ರೀ-ಪುರುಷ ಯಾರೇ ಆಗಲಿ ತಲೆಗೂದಲಿನ ಬಗ್ಗೆ ಕಾಳಜಿ ವಹಿಸಲೇ ಬೇಕು.ಮಾರುಕಟ್ಟೆಯಲ್ಲಿ ಸಿಗುವ ಜೆಲ್ ,ಶ್ಯಾಂಪೂ ,ಕಂಡಿಷನರ್ ,ಎಣ್ಣೆ ಎಲ್ಲವೂ ಕೇಶ ಸಂರಕ್ಷಕಗಳೇ ,ಆದ್ರೂ ತುಂಬ ಕೆಮಿಕಲ್ ಗಳನ್ನು ಉಪಯೋಗಿಸಿದ್ರೆ ಕೇಶ ಸಂಹಾರವಾಗೋದು ಖಂಡಿತಾ .ಇದಕ್ಕಾಗಿ ನಮ್ಮ ಮನೆಯಲ್ಲೇ ಸಿಗುವ ,ಹಿತ್ತಲಲ್ಲೇ ದೊರಕುವ ಗಿಡಮೂಲಿಕೆಗಳನ್ನು ಬಳಸಿ ಸುಂದರ ಕೇಶರಾಶಿಯನ್ನು ಪಡೆಯುವ ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ದಾಸವಾಳ ಹೂವಿನ ಗಿಡದ ಎಲೆಗಳು ತಲೆಗೂದಲಿಗೆ ಬಹಳ ಒಳ್ಳೆಯದು.ಯಾವುದೇ ದಾಸವಾಳ ಎಲೆಗಳನ್ನು ಮುಷ್ಟಿಯಷ್ಟು ತೆಗೆದುಕೊಂಡು ,ಬಿಸಿನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.ನಂತರ ಅವನ್ನು ಕೈಯಿಂದಲೇ ಹಿಸುಕಿ ಆ ಲೋಳೆ ರಸವನ್ನು ತಲೆ ಸ್ನಾನವಾದ ನಂತರ ಕಂಡಿಷನರ್ ನಂತೆ ಹಚ್ಚಿಕೊಂಡು ಕೆಲವು ನಿಮಿಷ ಮಸಾಜು ಮಾಡಿ ನಂತರ ತಲೆ ತೊಳೆಯಿರಿ .ಇದರಿಂದ ಕೂದಲು ನುಣುಪು ,ಹೊಳಪು ಪಡೆಯುತ್ತದೆ ,ಉದ್ದ ಬೆಳೆಯುತ್ತದೆ,ಅಕಾಲ ನೆರೆಯನ್ನು ತಡೆಯುತ್ತದೆ.

ತೆಂಗಿನ ಎಣ್ಣೆಗೆ ಭ್ರಿಂಗರಾಜ ಗಿಡದ ಎಲೆಗಳು,ಒಂದೆಲಗ ಗಿಡದ ಎಲೆಗಳು ಮತ್ತು ಮೆಂತೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ.ನಂತರ ಶೋಧಿಸಿ ಗಾಜಿನ ಬಾಟಲಿನಲ್ಲಿ ತುಂಬಿಡಿ .ಇದನ್ನು ನಿರಂತರವಾಗಿ ತಲೆಗೆ ಹಾಕಿ ಮಸಾಜು ಮಾಡುವುದರಿಂದ ಹೊಟ್ಟು ಆಗುವುದಿಲ್ಲ ಮತ್ತು ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ.

ಕೆಲವರಿಗೆ ತಲೆಗೂದಲು ಸಿನಿಮಾ ನಟಿಯರಂತೆ ಉದ್ದವಾಗಿ ,ಗುಂಗುರು ಇಲ್ಲದೆ ಇರಬೇಕು ಎಂಬ ಆಸೆಯಿರುತ್ತದೆ.ಇದಕ್ಕಾಗಿ ದುಬಾರಿ ಹೇರ್ ಸ್ಟ್ರೇಟ್ ನಿಂಗ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ,ಇದು ಅಷ್ಟು ಒಳ್ಳೆಯದಲ್ಲ.ಮನೆಯಲ್ಲೇ ಕೂದಲು ಸ್ಟ್ರೇಟ್ ನಿಂಗ್ ಮಾಡಿಕೊಳ್ಳಬಹುದು.ಒಂದು ಕಪ್ ಮುಲ್ತಾನಿ ಮಿಟ್ಟಿ ,ಅಷ್ಟೇ ಪ್ರಮಾಣದ ಅಕ್ಕಿ ಹಿಟ್ಟು ಬೆರೆಸಿ ಎರಡು ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಸ್ವಲ್ಪ ನೀರೂ ಸೇರಿಸಿ ತಲೆಗೂದಲನ್ನು ಎಳೆ ಎಳೆಯಾಗಿ ಬಿಡಿಸಿಕೊಂಡು ಹಚ್ಚಿಕೊಳ್ಳಿ ,ಒಂದು ಗಂಟೆಯ ನಂತರ ತಲೆ ತೊಳೆಯಿರಿ .ವಾರಕ್ಕೆರಡು ಬಾರಿ ಈ ಪ್ರಕ್ರಿಯೆಯನ್ನು ಮಾಡುವುದರಿಂದ ತಲೆ ಕೂದಲು ಉದ್ದವಾಗಿ ನೀಳವಾಗಿರುತ್ತದೆ

ತಲೆಗೂದಲನ್ನು ತೊಳೆಯಲು ವಾರಕ್ಕೊಮ್ಮೆ ಮನೆಯಲ್ಲೇ ಮಾಡುವ ಪುಡಿ ತಯಾರಿಸಿಕೊಳ್ಳಬಹುದು .ಸೀಗೆ ಪುಡಿ ,ಮೆಂತೆ ಪುಡಿ,ಅಂಟುವಾಳದ ಪುಡಿ ಸೇರಿಸಿ ಗಾಳಿ ಆಡದ ಡಬ್ಬದಲ್ಲಿ ತುಂಬಿಸಿಟ್ಟು ಉಪಯೋಗಿಸಿದರೆ ತಲೆ ಹೊಟ್ಟು ,ತಲೆ ಉರಿಯುವಿಕೆ,ಕಜ್ಜಿಗಳಿಂದ ದೂರವಿರಬಹುದು.

Comments are closed.