
ಮಂಗಳೂರು, ಆಗಸ್ಟ್.08: ಬೀಡಿ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರಡೇಶನ್ (ಸಿಐಟಿಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಮಂಗಳವಾರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಬುಧವಾರ ಕೂಡ ಮುಂದುವರಿದಿದೆ.
ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸುಮಾರು 200ಕ್ಕೂ ಅಧಿಕ ಬೀಡಿ ಕಾರ್ಮಿಕ ಮಹಿಳೆಯರು, ಕನಿಷ್ಟ ಕೂಲಿ 1 ಸಾವಿರ ಬೀಡಿಗೆ 210 ರೂ. ಜಾರಿಗೊಳಿಸಬೇಕು, ವಾರದಲ್ಲಿ 6 ದಿನ ಕೆಲಸ ನೀಡಬೇಕು, ಕೆಲಸ ನೀಡದ ದಿನದ ವೇತನ ನೀಡಬೇಕು, 2015ರ ಬಾಕಿ ತುಟ್ಟಿಭತ್ತೆಯನ್ನು ನೀಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು)ನ ಅಧ್ಯಕ್ಷ ವಸಂತ ಆಚಾರಿ, ರಾಜ್ಯದಲ್ಲಿ ಸುಮಾರು 10 ಲಕ್ಷ ಕಾರ್ಮಿಕರು ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಮಿಕರ ಕನಿಷ್ಟ ವೇತನವನ್ನು 2018ರ ಎಪ್ರಿಲ್ 1ರಿಂದ ಅನ್ವಯ ಆಗುವಂತೆ ಪರಿಷ್ಕರಿಸಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಬೀಡಿ ಕಂಪೆನಿಯ ಮಾಲಕರು ಈ ಪರಿಷ್ಕೃತ ಆದೇಶದಂತೆ ವೇತನ ನೀಡದೆ ವಂಚಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಯು.ಬಿ.ಲೋಕಯ್ಯ, ಬೀಡಿ ಕಾರ್ಮಿಕರ ಸಂಘಗಳ ನಾಯಕರಾದ ಪುಷ್ಪಾ ಶಕ್ತಿನಗರ, ವಿಲಾಸಿನಿ, ಸುಂದರ ಕುಂಪಲ, ಜಯರಾಮ, ಶ್ರೀನಿವಾಸ, ಜನಾರ್ದನ ಕುತ್ತಾರ್, ಪುಷ್ಪಾ ಕುಂಪಲ, ಮುನೀರ್ ಕಾಟಿಪಳ್ಳ, ಸದಾಶಿವ ದಾಸ್, ಗಂಗಯ್ಯ ಅಮೀನ್, ನೋಣಯ್ಯ ಗೌಡ, ಜಯಂತ ನಾಯ್ಕಿ, ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ, ವಸಂತಿ ಮತ್ತಿತರರು ಪಾಲ್ಗೊಂಡಿದ್ದರು.

ನಾಳೆ ಕೂಡ ಧರಣಿ ಮುಂದುವರಿಕೆ : ಮೂರನೇ ದಿನದ ಧರಣಿ ಸತ್ಯಾಗ್ರಹವು ಗುರುವಾರ ಬೆಳಗ್ಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಡೆಯಲಿದೆ ಎಂದು ಫೆಡರಡೇಶನ್‌ನ ಮುಖಂಡರು ತಿಳಿಸಿದ್ದಾರೆ.
Comments are closed.