ಕರಾವಳಿ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಂಗಳೂರು ಆಕಾಶವಾಣಿ ಸಿಬ್ಬಂದಿ ಸಂಘದಿಂದ ಸಂಸದರಿಗೆ ಮನವಿ

Pinterest LinkedIn Tumblr

ಮಂಗಳೂರು : ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿ ಜಂಟಿ ಕ್ರಿಯಾ ಸಮಿತಿಯ ಆಹ್ವಾನದ ಮೇರೆಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸುವ ಪ್ರತಿಭಟನೆಯ ಮನವಿ ಪತ್ರವನ್ನು ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು ಅವರಿಗೆ ಮಂಗಳೂರಿನಲ್ಲಿ ನೀಡಲಾಯಿತು.

ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಸಿಬ್ಬಂದಿ ಸಂಘದ ನೇತೃತ್ವದ ನಿಯೋಗ ಸಲ್ಲಿಸಿದ ಮನವಿಯಲ್ಲಿ ಕೇಂದ್ರದ ವಾರ್ತಾ ಪ್ರಸಾರ ಖಾತೆಯು ಈ ಬಗ್ಗೆ ಸೂಕ್ತ ಗಮನ ಹರಿಸಿ ನ್ಯಾಯೋಚಿತ ಬೇಡಿಕೆ ಈಡೇರಿಸಲು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಲೋಕಸಭಾ ಸದಸ್ಯರು ಕಾರ್ಯಕ್ರಮ ಸಿಬ್ಬಂದಿಗಳ ಬೇಡಿಕೆಗಳನ್ನು ಆಲಿಸಿದ ನಂತರ ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ರಾಜ್ಯವರ್ಧನ್‌ಸಿಂಗ್ ರಾಠೋಡ್ ಅವರಿಗೆ ವಿಸ್ತೃತ ಪತ್ರ ಬರೆದು ಬೇಡಿಕೆ ಪರಿಗಣಿಸಲು ಒತ್ತಾಯಿಸಲಾಗುವುದಲ್ಲದೆ ಮುಖತಃ ಭೇಟಿಯಾಗಿ ಸಮಸ್ಯೆಯನ್ನು ವಿವರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

25-30 ವರ್ಷಗಳಿಂದ ಪದೋನ್ನತಿ ಪಡೆಯದೆ, ನಾಲ್ಕು ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಎಲ್ಲ ಕಾರ್‍ಯಕ್ರಮ ನಿರ್ವಾಹಕರಿಗೂ ವೇತನ ಬಡ್ತಿ, ಭಾರತೀಯ ಕಾರ್‍ಯಕ್ರಮ ಸೇವೆಗೆ ನಿಗದಿಗೊಳಿಸಿದ ಉನ್ನತ ಹುದ್ದೆಗಳಿಗೆ ತಾಂತ್ರಿಕ ಸೇವಾ ವಿಭಾಗದವರನ್ನು ನೇಮಿಸಬಾರದು.

ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಎಲ್ಲ ಕಾರ್ಯಕ್ರಮ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗಳಿಗೆ ನೀಡಬೇಕು. ಪ್ರಸಾರ ಭಾರತಿಯು ಕಾರ್ಯಕ್ರಮ ಸಿದ್ಧಪಡಿಸಲು ಖರ್ಚು ಮಾಡುವ ಒಟ್ಟು ವೆಚ್ಚದಲ್ಲಿ ಶೇ.15 ರಷ್ಟು ಮಾತ್ರ ಅನುದಾನ ನೀಡುತ್ತಿದ್ದು ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಿ ಗುಣಮಟ್ಟ ಕಾರ್ಯಕ್ರಮ ನಿರ್ಮಾಣ ಮಾಡಲು ಉತ್ತೇಜನ ನೀಡಬೇಕು. ಸಾರ್ವಜನಿಕ ಪ್ರಸಾರ ಸೇವೆಯ ಈ ಸಂಸ್ಥೆಯಲ್ಲಿ ಆಧಾರ ಸ್ತಂಭವಾಗಿರುವ ಕಾರ್ಯಕ್ರಮ ಸಿಬ್ಬಂದಿಗಳನ್ನು ಕಡೆಗಣಿಸದೆ ನ್ಯಾಯಯುತ ಬೇಡಿಕೆಗಳನ್ನು ಪೂರೈಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಂಗಳೂರು ಆಕಶವಾಣಿ ಕೇಂದ್ರದ ಕಾರ್ಯಕ್ರಮ ಸಿಬ್ಬಂದಿ ಸಂಘದ ಕಾರ್ಯದರ್ಶಿ ಟಿ.ಶ್ಯಾಮ್‌ಪ್ರಸಾದ್ ನೇತೃತ್ವದ ನಿಯೋಗದಲ್ಲಿ ಶ್ರೀಮತಿ ಉಷಾಲತಾ ಸರಪಾಡಿ, ಸೂರ್ಯನಾರಾಯಣ ಭಟ್, ಡಾ.ಸದಾನಂದ ಪೆರ್ಲ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಶ್ರೀಮತಿ ಕನ್ಸೆಪ್ಟಾ ಫೆರ್ನಾಂಡಿಸ್ ಇದ್ದರು.

ಪ್ರತಿಭಟನೆಯ ಅಂಗವಾಗಿ ಬೇಡಿಕೆ ಈಡೇರುವ ತನಕ ಮೊದಲ ಹಂತದಲ್ಲಿ ಪ್ರತಿ ದಿನ ಮಧ್ಯಾಹ್ನದ ವೇಳೆ ಕಚೇರಿಯ ಮುಂಭಾಗದಲ್ಲಿ ಬೇಡಿಕೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ.

Comments are closed.