ಕರಾವಳಿ

ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಲಾಂಛನ ಬಿಡುಗಡೆ

Pinterest LinkedIn Tumblr

ಮಂಗಳೂರು, ಆಗಸ್ಟ್.6: ನಗರದ ಪುರಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಲಾಂಛನವನ್ನು ಲೋಕಾರ್ಪಣೆಗೊಳಿಸಲಾಯಿತು.

ಲಾಂಛನ ಲೋಕಾರ್ಪಣೆಗೊಳಿಸಿ ಮಾತನಾಡಿದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಅವರು, ಸ್ವಾತಂತ್ರ ಹೋರಾಟಗಾರ್ತಿ ವೀರ ರಾಣಿ ಸ್ವಾಭಿಮಾನದ ಸಂಕೇತವಾಗಿದ್ದಾರೆ.ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕಳ ವೃತ್ತವನ್ನು ನಿರ್ಮಾಣ ಮಾಡಲು 10 ಲಕ್ಷ ರೂ.ನ್ನು ಬಿಡುಗಡೆ ಮಾಡಲಾಗುವುದು. ನೂತನ ಪ್ರತಿಷ್ಠಾನವನ್ನು ಒಗ್ಗಟ್ಟು, ಏಕತೆ, ಸಹೋದರತೆಯಿಂದ ನಡೆಸಿಕೊಂಡು ಹೋಗಬೇಕು. ಎಲ್ಲ ವರ್ಗಗಳನ್ನು ತೊಡಗಿಸಿಕೊಂಡು ಪೋರ್ಚುಗೀಸರ ವಿರುದ್ಧ ಹೋರಾಟ ಮಾಡುವಲ್ಲಿ ಅಬ್ಬಕ್ಕ ಯಶಸ್ವಿಯಾಗಿದ್ದರು. ಅಬ್ಬಕ್ಕ ನಾಡಿನ ಸಂಸ್ಕೃತಿಯ ಪ್ರತೀಕವಾಗಬೇಕು. ಇದಕ್ಕೆ ಸರಕಾರವೂ ಸಹಕಾರ ನೀಡಲಿದೆ ಎಂದು ಹೇಳಿದರು.

ವಿಶ್ರಾಂತ ಕುಲಪತಿ, ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ಕ್ಷೀಣಿಸುತ್ತಿದೆ. ಪ್ರತಿಷ್ಠಾನವು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಮುಂದುವರಿಯಬೇಕು. ಇದರಲ್ಲಿ ಮಹಿಳಾ ವಿಭಾಗ ಮಾಡಿಕೊಂಡು ದೌರ್ಜನ್ಯ, ಆತಂಕ ಎದುರಿಸುವಂತಹ ಜಾಗೃತಿ ಮೂಡಿಸುವ ಕೆಲಸಗಳನ್ನು ಪ್ರತಿಷ್ಠಾನ ಮಾಡಬೇಕು. ತಳಮಟ್ಟದ ಚಟುವಟಿಕೆಗಳನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಲೇಡಿಗೋಶನ್ ಹೆಸರು ಜಿಲ್ಲೆಯ ಜನತೆಗೆ ಪರಿಚಯವಿಲ್ಲ. ಆಸ್ಪತ್ರೆಯ ಹೆಸರನ್ನು ಬದಲಿಸಬೇಕು. ಅಬ್ಬಕ್ಕರಂತಹ ಹೆಸರನ್ನು ಇಡಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ರಾಣಿ ಅಬ್ಬಕ್ಕ ಸೇವಾ ಪುರಸ್ಕಾರವನ್ನು ಹಿರಿಯ ಸಮಾಜ ಸೇವಕಿ ಸುವಾಸಿನಿ ಬಬ್ಬುಕಟ್ಟೆ ಅವರಿಗೆ ಪ್ರೊ.ಬಿ.ಎ.ವಿವೇಕ ರೈ ಪ್ರದಾನ ಮಾಡಿದರು. ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ವಿ.ನಾವಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಲ್.ಭೋಜೇಗೌಡ, ಐವನ್ ಡಿಸೋಜ, ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ .ಸಿ.ಭಂಡಾರಿ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಆರ್.ಪಿ.ನಾಯ್ಕಾ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಮೈನಾ ಎಸ್.ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಬಶೀರ್ ಬೈಕಂಪಾಡಿ, ಮಮತಾ ಎಸ್. ಗಟ್ಟಿ, ಸದಾನಂದ ಬಂಗೇರಾ, ಶಿವಾನಂದ ಕರ್ಕೇರಾ, ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಬಿ. ಮತ್ತಿತರರು ಉಪಸ್ಥಿತರಿದ್ದರು.

Comments are closed.