ಕರಾವಳಿ

ಮಕ್ಕಳ ಸುರಕ್ಷತೆಗೆ ದಿಟ್ಟ ಕ್ರಮ; ಮಳೆಯ ನಡುವೆ ಪೊಲೀಸರಿಂದ ‘ಸ್ಕೂಲ್ ವೆಹಿಕಲ್’ ಕಾರ್ಯಾಚರಣೆ!

Pinterest LinkedIn Tumblr

ಕುಂದಾಪುರ: ಒಂದೆಡೆ ಬಿರುಸಿನಿಂದ ಮಳೆ ಸುರಿಯುತ್ತಿದ್ದರೇ ಇತ್ತ ಪೊಲೀಸರು ಮಳೆಯನ್ನು ಲೆಕ್ಕಿಸದೇ ಬೀದಿಗಿಳಿದಿದ್ದರು. ಶನಿವಾರ ಮಧ್ಯಾಹ್ನ ಬಿಡದೇ ಸುರಿಯುತ್ತಿದ್ದ ಮಳೆಯ ನಡುವೆ ಕುಂದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಶಾಲಾ ವಾಹನಗಳ ತಪಾಸಣೆ ಕಾರ್ಯ ನಡೆಸಿದರು. ಪ್ರತ್ಯೇಕ ಎರಡು ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಯಿತು.

ಕುಂದಾಪುರದ ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆ ಹಾಗೂ ಬಸ್ರೂರು ಮೂರುಕೈ ಸಮೀಪ ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಕುಂದಾಪುರ ಪೊಲೀಸರು ಎರಡು ಪ್ರತ್ಯೇಕ ತಂಡ ರಚಿಸಿಕೊಂಡು ದಿಡೀರ್ ಕಾರ್ಚಾರಣೆ ನಡೆಸಿದರು. ಶಾಲಾ ಬಿಡುವ ಸಮಯದಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ ವಾಹನದಲ್ಲಿ ಅಧಿಕ ಮಕ್ಕಳಿದ್ದರೇ ಆ ವಾಹನಗಳ ಸಂಬಂದಪಟ್ಟವರಿಗೆ ಎಚ್ಚರಿಕೆ ನೀಡಿದರು. ನಿರಂತರವಾಗಿ ಸಾರ್ವಜನಿಕರು ಹಾಗೂ ಪೋಷಕರಿಂದ ದೂರುಗಳು ಬರುತ್ತಿದ್ದ ಹಿನ್ನೆಲೆ ಈ ಕಾರ್ಯಾಚರಣೆ ನಡೆದಿತ್ತು.

ಮಳೆಯಲ್ಲೂ ಕಾರ್ಯಾಚರಣೆ…
ಶನಿವಾರ ಮಧ್ಯಾಹ್ನದ ಸುಮಾರಿಗೆ ನಿರಂತರ ಮಳೆ ಸುರಿಯುತ್ತಿದ್ದರೂ ಕೂಡ ಮಳೆಯಲ್ಲಿಯೇ ಪೊಲೀಸರು ರಸ್ತೆಗಿಳಿದು ಕೆಲಸ ನಿರ್ವಹಿಸಿದರು. ನಿಯಮ ಮೀರಿದ ಮೂರ್ನಾಲ್ಕು ವಾಹನಗಳಿಗೆ ಎಚ್ಚರಿಕೆ ನೀಡಿದರೆ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ ಪಿಎಸ್ಐ ಹರೀಶ್ ಆರ್. ನಾಯ್ಕ್ ಅವರು ಆಟೋವೊಂದರಲ್ಲಿ ನಿಯಮಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ದದ್ದಕ್ಕೆ ದಂಡ ವಿಧಿಸಿದ್ದರು.

ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಕುಂದಾಪುರ ಠಾಣೆ ಉಪನಿರೀಕ್ಷಕ ಹರೀಶ್ ಆರ್. ನಾಯ್ಕ್, ಕ್ರೈಮ್ ವಿಭಾಗದ ಪಿಎಸ್ಐ ರಮೇಶ್ ಪವಾರ್, ಎಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಕಳೆದ ಸೋಮವಾರ ಕರ್ಕಷ ಶಬ್ದ ಮಾಡುವ ನಾಲ್ಕು ಬುಲೆಟ್ ಬೈಕ್ ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಅವರಿಂದಲೇ ಮಾಮೂಲಿ ಸೈಲೆನ್ಸರ್ ಪೈಪ್ ಅಳವಡಿಸಿ ಬಿಟ್ಟಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.