ಕರಾವಳಿ

ದೇಹದಲ್ಲಿ ಕಬ್ಬಿಣಂಶದ ಕೊರತೆಯಿದೆಂದು ತಿಳಿಸುವ ವಿಲಕ್ಷಣ ಬದಲಾವಣೆಗಳು ಬಲ್ಲಿರಾ..?

Pinterest LinkedIn Tumblr

ನಮ್ಮ ದೇಹಕ್ಕೆ ಕಬ್ಬಿಣದಾಂಶ ಸೇರುವುದು ಅತ್ಯವಶ್ಯಕ. ಇದು ದೇಹದಲ್ಲಿರುವ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ. ಇದು ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕ ತಲುಪಿಸುವ ಕಾರ್ಯ ನಿರ್ವಹಿಸುವ ರಕ್ತದಲ್ಲಿನ ಹೀಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ. ಅತಿಯಾದ ಕಬ್ಬಿಣಂಶದ ಕೊರತೆಯಾದಾಗ ಇಡೀ ದಿನ ಸುಸ್ತು, ತಲೆ ಸುತ್ತುವಿಕೆಯ ಅನುಭವವಾಗುತ್ತದೆ. ಇದನ್ನೇ ‘ಅನೀಮಿಯ’ ಅಥವ ‘ರಕ್ತಹೀನತೆ’ ಎಂದು ಕರೆಯುತ್ತೇವೆ. ಋತುಚಕ್ರದಲ್ಲಿ ಆಗುವ ರಕ್ತಸ್ರಾವದಿಂದಾಗಿ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಮಗೆ ರಕ್ತಹೀನತೆ ಸಮಸ್ಯೆ ಇದ್ದರೆ ಮೊದಲೇ ತಿಳಿದುಕೊಂಡು ಅದಕ್ಕೆ ಬೇಕಾಗುವ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಒಳಿತು. ಹಾಗಾದರೆ ರಕ್ತಹೀನತೆಯನ್ನು ತಡೆಗಟ್ಟಲು, ನಮ್ಮ ದೇಹವು ಕಬ್ಬಿಣಾಂಶವು ಬೇಕು ಕೇಳಲು ಕೆಲವೊಂದು ಲಕ್ಷಣಗಳನ್ನು ತೋರಿಸುತ್ತದೆ. ಹಾಗಾದರೆ ನಮ್ಮ ದೇಹದಲ್ಲಾಗುವ ಆ ಕೆಲವು ವಿಲಕ್ಷಣ ಬದಲಾವಣೆಗಳೇನು ತಿಳಿದುಕೊಳ್ಳೋಣ ಬನ್ನಿ;

ನಾಲಿಗೆ ಊದಿಕೊಳ್ಳುವುದು:
ದೇಹದಲ್ಲಿ ರಕ್ತಹೀನತೆಯಾದರೆ ‘ಅಟ್ರಾಪಿಕ್ ಗ್ಲಾಸಿಟಸ್ (atrophic glossitis)’ ಎಂಬ ರೋಗಲಕ್ಷಣ ಕಾಣಿಸಿಕೊಂಡು ನಾಲಿಗೆ ಊದಿಕೊಂಡು ಮಾಂಸದ ತುಂಡಿನಂತೆ ಕಾಣುತ್ತದೆ. ಇದು ರಕ್ತಹೀನತೆಯ ಅತಿ ಮುಖ್ಯ ಲಕ್ಷಣ. ರುಚಿ ಗ್ರಂಥಿಗಳ ನಾಶವಾಗುವಿಕೆಯಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸೌಂದರ್ಯಕ್ಕೆ ಧಕ್ಕೆ ತರುವದಲ್ಲದೆ, ಅತಿಯಾದ ನೋವಿನಿಂದ ಕೂಡಿರುತ್ತದೆ. ತಿನ್ನಲು, ಕುಡಿಯಲು ಹಾಗು ಮಾತನಾಡಲು ಬಹಳ ಹಿಂಸೆ ಆಗುತ್ತದೆ. ನಿಮ್ಮಲ್ಲಿ ಈ ತೆರನಾದ ಯಾವುದೇ ಲಕ್ಷಣಗಳು ಕಂಡು ಬಂದರೆ ಕೂಡಲೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು.

ಐಸ್ ತಿನ್ನಬೇಕೆಂಬ ಬಯಕೆ:
ಮಂಜುಗಡ್ಡೆಯನ್ನು ಜಗಿದು ತಿನ್ನಬೇಕೆಂಬ ಅತಿಯಾದ ಬಯಕೆ ಹೊಂದಿರುವುದನ್ನು ‘ಪ್ಯಾಗೊಫೆಜಿಯ(pagophagia)’ ಎಂದು ಕರೆಯುತ್ತೇವೆ. ಇದು ತಿನ್ನುವುದರಿಂದ ಊದಿಕೊಂಡಿರುವ ನಾಲಿಗೆಗೆ ಆಗಿರುವೆ ಹಿಂಸೆ ಕಡಿಮೆಯಾಗಬಹುದು. ಕೆಲವು ರೋಗಿಗಳು ಲೋಟ ಮತ್ತು ಬಕೆಟ್‌ನಷ್ಟು ಮಂಜು ತಿಂದಿರುವ ನಿದರ್ಶನಗಳಿವೆ. ಇದು ಕೂಡ ರಕ್ತಹೀನತೆಯನ್ನು ಸೂಚಿಸುತ್ತದೆ.

ಮಣ್ಣು ತಿನ್ನುವ ಆಸೆ:
ಈ ಲಕ್ಷಣಕ್ಕೆ ಮುಖ್ಯವಾದ ಕಾರಣ ಏನೆಂದು ಇನ್ನೂ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ಪ್ಲಾಸ್ಟರ್, ಪೈಂಟ್, ಕೂದಲು ಅಷ್ಟೆ ಅಲ್ಲ ಮಣ್ಣನ್ನು ತಿನ್ನುವ ಅತಿಯಾದ ಪ್ರಚೋದನೆಯಾಗುತ್ತದೆ. ಆದರೆ ಕಬ್ಬಿಣಾಂಶವನ್ನು ಪೂರೈಸುವ ಮಾತ್ರೆಗಳ ಸೇವನೆಯಿಂದ ಈ ಸ್ಥಿತಿಯನ್ನು ನಿಭಾಯಿಸಬಹುದು.

ಒಡೆದ ತುಟಿಗಳು:
ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ ಸರಿ. ಆದರೆ ಕಬ್ಬಿಣಾಂಶದ ಕೊರತೆ ಇರುವವರಿಗೆ ತುಟಿಯ ಸಂದುಗಳಲ್ಲಿ ಸೀಳುವಿಕೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ‘ಆಂಗುಲರ್ ಚೆಲಿಟಿಸ್ (Angular cheilitis)’ ಎನ್ನುತ್ತಾರೆ. ಈ ಸ್ಥಿತಿಯು ರೋಗಿಗಳಿಗೆ ಮಾತಾಡಲು, ನಗಲು ಅಷ್ಟೆ ಅಲ್ಲ ತಿನ್ನಲು ಕೂಡ ತೊಂದರೆ ಮಾಡುತ್ತದೆ. ಆಂಗುಲರ್ ಚೆಲಿಟಿಸ್ ಬೇರೆ ಅನೇಕ ರೋಗಗಳ ಲಕ್ಷಣ ಕೂಡ ಆಗಿದೆ. ಆದ್ದರಿಂದ ಈ ಲಕ್ಷಣ ಕಂಡುಬಂದರೆ ಬೇಗನ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಕಾಲುಗಳಲ್ಲಿ ಜುಮ್ಮೆನಿಸುವಿಕೆ:
ನಾವು ಬಹಳ ಹೊತ್ತು ಒಂದೇ ಕಡೆ ಕುಳಿತರೆ ಜೋಮು ಹಿಡಿಯುವದು ಸಾಮಾನ್ಯ. ಆದರೆ ಇದನ್ನು ನಾವು ಯಾವತ್ತೂ ನಿರ್ಲಕ್ಷಿಸಬಾರದು. ಕಬ್ಬಿಣಂಶದ ಕೊರತೆ ಇದ್ದಾಗ ಈ ಅನುಭವ ಆಗುವುದು. ಇದು ಮಾತ್ರೆ ತೆಗೆದುಕೊಳ್ಳುವವರೆಗೂ ಕಾಡುತ್ತದೆ.

ಚಮಚದಾಕಾರದ ಉಗುರುಗಳು:
ಉಗುರುಗಳು ಬಾಗಿದಂತಾಗಿ ಬಿರುಸಾಗುವ ಸ್ಥಿತಿಗೆ ‘ಕೊಯಿಲೊನೈಕಿಯ (koilonychia)’ ಎನ್ನುತ್ತಾರೆ. ಇದು ಕೂಡ ಕಬ್ಬಿಣಾಂಶದ ಕೊರತೆಯಿಂದ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಉಗುರುಗಳನ್ನು ಸುಲಭವಾಗಿ ಕೈಯಿಂದಲೇ ಮುರಿಯಬಹುದು. ಈ ಲಕ್ಷಣ ಕಂಡುಬಂದರೆ ಕೂಡಲೇ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು.

Comments are closed.